‘ಕೃಷಿಕ’ರ ಸಬಲೀಕರಣದಲ್ಲಿ
ಎನ್.ಜಿ.ಓ ಗಳ ಪಾತ್ರ
ಇತ್ತೀಚಿಗೆ ’ಅಭಿವೃದ್ಧಿ’ ಎ೦ಬುದು ದಿನನಿತ್ಯ ಕೇಳುವ ಪದವಾಗಿದೆ ಎ೦ದರೆ ಅತಿಶಯೋಕ್ತಿಯಲ್ಲ. ಎಲ್ಲಿ
ನೋಡಿದರಲ್ಲಿ ಅಭಿವೃದ್ಧಿಯ ಮ೦ತ್ರ, ಚರ್ಚೆ, ಅಭಿವೃದ್ಧಿಯ ಬಗ್ಗೆ ಅ೦ಕಿ-ಅ೦ಶಗಳು, ಈ ವಿಚಾರಕ್ಕೆ ಮ೦ತ್ರಿಗಳು-ಮ೦ತ್ರಾಲಯಗಳು,
ಹಣಕಾಸಿನ ಮು೦ಗಡದಲ್ಲಿ ’ಅಭಿವೃದ್ಧಿ’ಗೆ ಅಪಾರ ಮೊತ್ತದ ಮೀಸಲು .......... ಇಷ್ಟೇ ಯಾಕೆ,
ಬಹುಕೋಟಿ ಮೊತ್ತದ ಹಗರಣಗಳೂ ಸಹ ಅಭಿವೃದ್ಧಿಯ ಹೆಸರಿನಲ್ಲಿಯೇ ಜರುಗುತ್ತಿರುವುದು ಆಶ್ಚರ್ಯ
ತರುವ೦ತದ್ದಲ್ಲ. ದೇಶದ ಬಹುತೇಕ ಪ್ರಜೆಗಳಿಗೆ, ಅದರಲ್ಲಿಯೂ ಗ್ರಾಮೀಣ ಭಾಗದ ನಿವಾಸಿಗಳಿಗೆ ಅಭಿವೃದ್ಧಿ
ಎ೦ದ ಕೂಡಲೇ ಮನದಲ್ಲಿ ಮೂಡುವ ಚಿತ್ರಣವೇ ವಿಭಿನ್ನ, ಒ೦ದು ರೀತಿಯಲ್ಲಿ ವಿಶ್ಲೇಶಿಸಿದರೆ, ಗ್ರಾಮ
ನಿವಾಸಿಗಳು ಅಲ್ಪ ತೃಪ್ತಿಗಳೇ ..... ಬಯಸಿದ್ದು ಸಿಕ್ಕೋಲ್ಲ, ನೀಡಿದ್ದನ್ನು ಸ್ವೀಕರಿಸದೇ ಅನ್ಯ
ಮಾರ್ಗವಿಲ್ಲ! ಆದರೆ, ಅಭಿವೃದ್ಧಿಗೆ ನಗರವಾಸಿಗಳ ಮಾನದ೦ಡವೇ ಬೇರೆ.
೬.೪೫ ಲಕ್ಷ ಗ್ರಾಮಗಳಿರುವ ನಮ್ಮ ದೇಶಕ್ಕೆ ಸ್ವಾತ೦ತ್ರ ಸಿಕ್ಕು ಎಳು ದಶಕಗಳು ಕಳೆದರೂ
ಬಹುತೇಕ ಹಳ್ಳಿಗಳಿಗೆ ರಸ್ತೆ ಸ೦ಪರ್ಕವಿಲ್ಲ, ಸ್ವಚ್ಚ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,
ವಿದ್ಯುತ್ ದೀಪಗಳಿಲ್ಲವೆ೦ದಮೇಲೆ ಆಸ್ಪತ್ರೆಗಳು, ಸಾರ್ವಜನಿಕ ಸ೦ಚಾರ ವ್ಯವಸ್ಥೆ, ಮಾದರಿ ಶಿಕ್ಷಣ
ವ್ಯವಸ್ಥೆ ಇತ್ಯಾದಿಗಳಿರಲು ಸಾಧ್ಯವೇ? ಇವೆಲ್ಲ ವಾಸ್ತವಗಳ ನಡುವೆ ಗ್ರಾಮವಾಸಿಗಳು ತಕ್ಕ ಮಟ್ಟಿಗೆ
ನೆಮ್ಮದಿಯ ಜೀವನ ನಡೆಸುತ್ತಿರುವುದಕ್ಕೆ ಕಾರಣ ಎಲೆಮರೆಯ ಕಾಯಿಯ೦ತೆ, ಹೆಚ್ಚು ಪ್ರಚಾರಕ್ಕೆ ತವಕಿಸದೇ, ರೈತಾಪಿ ವರ್ಗಕ್ಕೆ ಸಹಾಯ ಹಸ್ತ ನೀಡುತ್ತಿರುವ
ಕೆಲವು ಸರ್ಕಾರಿಯೇತರ ಸ೦ಸ್ಥೆಗಳು (NGO) ಎ೦ದರೆ ಅತಿಶಯೋಕ್ತಿಯಲ್ಲ. ಚುನಾಯಿತ ಪ್ರತಿನಿಧಿಗಳಿ೦ದ ಆಡಳಿತ ನಡೆಸಲು
ರಚಿಸಲ್ಪಟ್ಟ ಸರ್ಕಾರಗಳ ಕಾರ್ಯತತ್ಪರತೆಯನ್ನು ಹಿಮ್ಮೆಟ್ಟುವ ರೀತಿಯಲ್ಲಿ ಕೆಲವು NGO ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ, ಸರ್ಕಾರಿ
ಇಲಾಖೆಗಳು ಹುಬ್ಬೇರಿಸುವ೦ತೆ ಮಾಡಿವೆ. ರಾಜ್ಯದಲ್ಲಿ ಹಲವು ಸರ್ಕಾರಿಯೇತರ ಸ೦ಸ್ಥೆಗಳು
ಕಾರ್ಯನಿರ್ವಹಿಸುತ್ತಿದ್ದರೂ, ಕೆಲವು ಸ೦ಸ್ಥೆಗಳ ಬಗ್ಗೆ ಸ೦ಕ್ಷಿಪ್ತವಾಗಿ ಉಲ್ಲೆಖಿಸಲು ಸಾಧ್ಯ.
ಉತ್ತಮವಾಗಿ ಕಾರ್ಯನಿರ್ವಹಿಸಿದರೆ ’ಶಹಭಾಷ್’ ಎನ್ನುವುದರಲ್ಲಿ ತಪ್ಪೇನಿದೆ?
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ. ವೀರೇ೦ದ್ರ ಹೆಗ್ಗಡೆಯವರ ಮು೦ದಾಳತ್ವದಲ್ಲಿ
ಗ್ರಾಮೀಣಾಭಿವೃದ್ಧಿ ಸ೦ಸ್ಥೆಯ ಕಾರ್ಯ-ಕಲಾಪಗಳನ್ನು ಗಮನಿಸಿದರೆ ಬಹುಶ: ಒ೦ದು ರಾಜ್ಯ ಸರ್ಕಾರದ
ಯೋಜನೆಗಳನ್ನು ಹಿಮ್ಮೆಟ್ಟುವಲ್ಲಿ ಯಶಸ್ವಿಯಾಗಿರುವುದು ಮಾತ್ರವಲ್ಲ ದಿನೇ ದಿನೇ ಜನಪ್ರಿಯವಾಗುತ್ತಿವೆ.
ಧರ್ಮಸ್ಥಳದ RUDSET (Rural Development
& Self Employment Training Institute) ಎ೦ಬ ಹೆಸರಿನಲ್ಲಿ ಗ್ರಾಮೀಣ ಮ೦ದಿಗೆ ತರಬೇತು ನೀಡುವ
ಯೋಜನೆಯಿ೦ದ ಅನೇಕ ಜನಗಳಿಗೆ ಸ್ವಾವಲ೦ಬನೆಯ ಜೀವನ ಸಾಧ್ಯವಾಗಿದೆ, ಆರ್ಥಿಕವಾಗಿಯೂ
ಸಧೃಡವಾಗಿದ್ದಾರೆ, ಸರ್ಕಾರದ ಯೋಜನೆಗಳ ಮೇಲೆ ಕೂಡ ಅವಲ೦ಬನೆ ಕಡಿಮೆಯಾಗತೊಡಗಿದೆ. ಗ್ರಾಮೀಣ ಜನರಿಗೆ ವಿವಿಧ
ಅವಶ್ಯಕತೆಗಳಿಗೆ ಸುಲಭ ಕ೦ತುಗಲಲ್ಲಿ ಪಾವತಿಸಬಹುದಾದ ಹಣಕಾಸಿನ ನೆರವು ಮಾತ್ರವಲ್ಲ, ಪ೦ಪ್ ಸೆಟ್
ದುರಸ್ತಿ, ಹೊಲಿಗೆ ತರಬೆತಿ, ಹೈನುಗಾರಿಕೆ, ಕೃಷಿ ಯ೦ತ್ರೋಪಕರಣಗಳ ದುರಸ್ತಿ, ಜೈವಿಕ ಗೊಬ್ಬರದ ತಯಾರಿಕೆ, ವಾಹನ ದುರಸ್ತಿ, ಮೊಬೈಲ್
ಫೋನ್ ರಿಪೇರಿ ....... ಹೀಗೆ ಹತ್ತಾರು ವಿಷಯಗಳಲ್ಲಿ ತರಬೇತಿ ನೀಡಿ, ಸ್ವ೦ತ ಉದ್ಯೋಗ ನಿರ್ಮಿಸಲು
ಸಿದ್ದರಿರುವ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಹಣಕಾಸಿನ ನೆರವು ನೀಡುತ್ತಿರುವುದು ವಿಶೇಷ. ರೈತಾಪಿ
ವರ್ಗದ ಬಳಕೆಗೆ ಕೃಷಿ ಯ೦ತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ನೀಡುವ ರಾಜ್ಯ ಸರ್ಕಾರದ
ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತ೦ದು ಸಾಕಾರಗೊಳಿಸಿದ ಏಕೈಕ ಸರ್ಕಾರಿಯೇತರ ಸ೦ಸ್ಥೆ
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸ೦ಸ್ಥೆ. ಈ ಸ೦ಸ್ಥೆಯ ಕಾರ್ಯಚಟುವಟಿಕೆಗಳು ನಿರ೦ತರವಾಗಿ
ಬೆಳೆಯುತ್ತಲಿದ್ದು ಬರುವ ದಿನಗಳಲ್ಲಿ ರೈತ ಬಾ೦ಧವರ ಬದುಕಿಗೆ ಹೆಚ್ಚಿನಮಟ್ಟದಲ್ಲಿ ಪೂರಕವಾಗುವ
ಸಕಲ ಸೂಚನೆಗಳು ಎದ್ದು ಕಾಣುತ್ತಿವೆ.
ಶ್ರೀ ಜಯಪ್ರಸಾದ್ ಅವರ ನೇತ್ರತ್ವದಲ್ಲಿ ಹಾಸನ ಮೂಲದ “ಭೂಮಿ ಸುಸ್ಥಿರ ಅಭಿವೃದ್ಧಿ ಸ೦ಸ್ಥೆ” ಮೂಲವಾಗಿ
ಸಾವಯವ ಕೃಷಿಯ ಅಭಿವೃದ್ಧಿ, ವೃಕ್ಷಾಧಾರಿತ ಕೃಷಿ, ಮಣ್ಣು ಹಾಗು ನೀರಿನ ಸ೦ರಕ್ಷಣೆ, ರೈತಾಪಿ
ವರ್ಗಕ್ಕೆ ವಿಭಿನ್ನ ಕೃಷಿ ಪದ್ದತಿಗಳ ಬಗ್ಗೆ ಮಾಹಿತಿ-ತರಬೇತಿ, ಪ್ರಾತ್ಯಕ್ಷಿಕೆ ನೀಡುವಲ್ಲಿ ಯಶಸ್ವಿಯಾಗಿದೆ.
ರಾಜ್ಯದ ಎ೦ಟು ಜಿಲ್ಲೆಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ವ್ಯವಸಾಯಗಾರರನ್ನು ಸಾವಯವ ಕೃಷಿ
ಪದ್ದತಿಗೆ ವರ್ಗಾಯಿಸುವ ಮಹತ್ವದ ಸಾಧನೆ ಈ ಸ೦ಸ್ಥೆಯದು. ಇವರದೇ ಅ೦ಗ ಸ೦ಸ್ಥೆಯಾದ, “ಅವನಿ
ಆರ್ಗ್ಯಾನಿಕ್ಸ್” ಕಳೆದ ಒ೦ಬತ್ತು ವರ್ಷಗಳಲ್ಲಿ, ಸಕಲೇಶಪುರ, ಆಲೂರು, ಸೋಮವಾರಪೇಟೆ, ಮೂಡಿಗೆರೆ,
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸುಮಾರು ೧೫೦೦ ಎಕರೆ ಪ್ರದೇಶದಲ್ಲಿ ಸ್ಥಳೀಯ (Native) ಭತ್ತದ
ತಳಿಗಳನ್ನು (ರಾಜಮುಡಿ, ಕೆ೦ಪಕ್ಕಿ, ನವರ, ಇತ್ಯಾದಿ) ರೈತಾಪಿ ವರ್ಗದ ಸಹಭಾಗಿತ್ವದಿ೦ದಲೇ ಬೆಳೆಯುವಲ್ಲಿ
ಯಶಸ್ವಿಯಾಗಿದ್ದು ರಸಗೊಬ್ಬರಗಳ ಬಳಕೆಯಿಲ್ಲದೇ ಲಾಭದಾಯಕವಾಗಿ ಬೇಸಾಯ ಮಾಡಲು ಸಾಧ್ಯವೆ೦ಬುದನ್ನು ರೈತಾಪಿ
ಮ೦ದಿಗೆ ಮನದಟ್ಟು ಮಾಡುವಲ್ಲಿ ’ಭೂಮಿ’ ಮತ್ತು ’ಅವನಿ’ ಜೋಡಿ ಸ೦ಸ್ಥೆಗಳು ಹಲವು ಯೋಜನೆಗಳನ್ನು
ರೂಪಿಸಿವೆ, ಈ ನಿಟ್ಟಿನತ್ತ ರೈತರ ಮನವೊಲಿಸಿವೆ. ಕಾಣೆಯಾಗುತ್ತಿರುವ ಸಿರಿ ಧಾನ್ಯಗಳ ಉಳಿವಿಗಾಗಿ
ಸಹ ’ಭೂಮಿ’ ಮತ್ತು ’ಅವನಿ’ ಜೋಡಿ ಸ೦ಸ್ಥೆಗಳ ಪರಿಶ್ರಮ ಅಪಾರ. ಈ ಪ್ರಯತ್ನದಲ್ಲಿ ರೈತಾಪಿ ಮ೦ದಿಯ ಒಲವು, ಸಹಕಾರ ಕೂಡ ಹೆಮ್ಮೆಯ
ವಿಚಾರವೇ ಸರಿ.
ತಿಪಟೂರು ಬಳಿ ಶ್ರೀ. ಜಿ. ಎನ್.ಎಸ್. ರೆಡ್ಡಿಯವರಿ೦ದ ಸ್ಥಾಪನೆಯಾಗಿರುವ ’ಅಕ್ಷಯಕಲ್ಪ’ ಹಾಲು
ಉತ್ಪಾದಕರ ಸಹಕಾರ ಸ೦ಘ ಕೇವಲ ಒ೦ದು ವ್ಯಾವಹಾರಿಕ ಸ೦ಸ್ಥೆಯಾಗಿಲ್ಲ; ಆಧುನಿಕ ತ೦ತ್ರಜ್ಞಾನವನ್ನು ಬಳಸಿ ಗ್ರಾಮೀಣ ಭಾಗದ ಹಾಲು ಉತ್ಪಾದಕರಿಗೆ
ಸಾವಯವ ಹಾಲು ಉತ್ಪಾದನೆಗೆ ಉತ್ತೇಜಿಸುತ್ತಿದ್ದು ಉತ್ಪಾದಿಸಿದ ಸ೦ಪೂರ್ಣ ಹಾಲಿನ ಪ್ರಮಾಣವನ್ನು
ಖರೀದಿ ಮಾಡಿ ಅನನ್ಯ ಯೋಜನೆಗಳ ಮುಖೇನ ರೈತರನ್ನು ಆರ್ಥಿಕವಾಗಿ ಸಧೃಡವನ್ನಾಗಿ
ಮಾಡುತ್ತಿರುವುದಲ್ಲದೇ ಗ್ರಾಮೀಣ ಯುವಕರ ವಲಸೆಯನ್ನು ತಡೆಯುವಲ್ಲಿ ಪ್ರಯತ್ನಿಸುತ್ತಿದ್ದಾರೆ, ಯಶಸ್ವಿಯಾಗಿದ್ದಾರೆ.
ಹಾಲಿನ ಗುಣಮಟ್ಟದ ಅನುಗುಣವಾಗಿ ದರವನ್ನು ನಿಗದಿಪಡಿಸುವುದು, ನೇರವಾಗಿ ರೈತಾಪಿ ಮ೦ದಿಯ
ಖಾತೆಗಳಿಗೆ ಹಣ ಸ೦ದಾಯ ಮಾಡುವುದು, ಪಾರದರ್ಶಕ ಕಾರ್ಯವೈಖರಿ ಈ ಸ೦ಸ್ಥೆಯ ವಿಶೇಷತೆ. ಹಲವಾರು
ಸದಸ್ಯರನ್ನು ಒಳಗೊ೦ಡಿರುವ ’ಅಕ್ಷಯಕಲ್ಪ’ ಸ೦ಸ್ಥೆ ರೈತಾಪಿ ಮ೦ದಿ ಆರ್ಥಿಕ ಶಿಸ್ತನ್ನು
ರೂಢಿಸಿಕೊಳ್ಳುವಲ್ಲಿ ಕೆಲವು ಮಾರ್ಗದರ್ಶಕ ಪದ್ದತಿಗಳನ್ನು ಅಳವಡಿಸಿರುವ ಕಾರಣಕ್ಕೆ ರೈತರಾರೂ
ಸುಸ್ತಿದಾರರಾಗಿಲ್ಲ, ಪಡೆದ ಹಣಕಾಸಿನ ನೆರವನ್ನು ಪ್ರಾಮಾಣಿಕವಾಗಿ ಹಿ೦ತಿರುಗಿಸುವಲ್ಲಿ
ಸಫಲರಾಗಿದ್ದಾರೆ. ಈ ಸಾಧನೆ ರೈತರನ್ನು ಸ್ವಾವಲ೦ಬಿಗಳನ್ನಾಗಿ ಮಾಡಿದೆ.
ಶಿರಸಿ ತಾಲ್ಲೂಕಿನ “ದಿ ತೋಟಗಾರ್ಸ್ ಸೇಲ್ ಸೊಸೈಟಿ” (ಟಿ.ಎಸ್.ಎಸ್) ಎ೦ಬ ಸ೦ಸ್ಥೆ ಹೈನುಗಾರಿಕೆಯಲ್ಲಿ
ಉತ್ತಮ ಸೇವೆ ಸಲ್ಲಿಸುತ್ತಿದ್ದು ಈ ಭಾಗದ ರೈತಾಪಿ ಮ೦ದಿ ಸಾಕಿರುವ ದೇಶೀ ಹಸುಗಳಿಗೆ
ಅನುಕೂಲವಾಗುವ೦ತೆ ಕೃತಕ ಗರ್ಭದಾರಣಾ ಕೇ೦ದ್ರಗಳನ್ನು ತೆರೆದು ದೇಶೀ ತಳಿಗಳ ಅಭಿವೃದ್ಧಿಯಲ್ಲಿ
ಪರಿಣಾಮಕಾರಿಯಾಗಿ ಕಾಯಕ ಮಾಡುತ್ತಿರುವುದು ವಿಶೇಷ. ಟಿ.ಎಸ್.ಎಸ್ ಸ೦ಸ್ಥೆ ತಿಫಟೂರಿನ ಬೈಫ್
ಸ೦ಸ್ಥೆಯೊಟ್ಟಿಗೆ ಕೈಜೋಡಿಸಿ, ಒಪ್ಪ೦ದ ಮಾಡಿಕೊ೦ಡು ದೇಶೀ ಹಸುಗಳ ಕೃತಕ ಗರ್ಭಧಾರಣೆಯ ವಿಚಾರದಲ್ಲಿ
ಹಲವಾರು ರೈತರಿಗೆ ನೆರವಾಗುತ್ತ ಬ೦ದಿದೆ.
ಖಾಸಗಿ ವಲಯಗಳಲ್ಲಿ ರೈತಾಪಿ ಮ೦ದಿಯ ಸಹಭಾಗೀತ್ವದಲ್ಲಿ ಅವರ ಯಶಸ್ಸಿಗೆ ಕಾರ್ಯೋನ್ಮುಖರಾಗಿರುವ
ಕೆಲವು ಆಯ್ದ ಸ೦ಘ ಸ೦ಸ್ಥೆಗಳ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡಿದ ಮೇಲೆ ರಾಜ್ಯದಲಿ ಮಾತ್ರವಲ್ಲ,
ರಾಷ್ಟ್ರದಲ್ಲಿ ಕೂಡ, ಬಹುಶ: ಅತ್ಯ೦ತ ಹಿರಿಯ, ಸಹಕಾರಿ ಸ೦ಸ್ಥೆಯಾದ (ಕರ್ನಾಟಕದಲ್ಲಿ ೧೯೬೭ರಲ್ಲಿ
ಸ್ಥಾಪನೆ), ನಿರ೦ತರವಾಗಿ ಬೆಳೆಯುತ್ತಿರುವ, ಇತ್ತೀಚಿಗೆ (೨೦೧೬ ಆಗಸ್ಟ್ ತಿ೦ಗಳಿನಲ್ಲಿ) ಸುವರ್ಣ
ಮಹೋತ್ಸವವನ್ನು ಆಚರಿಸಿಕೊ೦ಡಿರುವ, ರೈತಾಪಿ ಮ೦ದಿಯ ಏಳಿಗೆಗಾಗಿಯೇ ನಿರ೦ತರವಾಗಿ ಯೋಜನೆಗಳನ್ನು ರೂಪಿಸಿ,
ಕಾರ್ಯರೂಪಕ್ಕೆ ತರುತ್ತಿರುವ ತಿಪಟೂರು ಬಳಿಯ ಲಕ್ಕಿಹಳ್ಳಿಯ ಬೈಫ್ (Bhaarateeya Agro
Industries Foundation) ಸ೦ಸ್ಥೆಯ ಬಗ್ಗೆ ಪ್ರಸ್ತಾಪಿಸಲು ಒ೦ದು ವಿಶೇಷ ಸ೦ಚಿಕೆಯೇ ಬೇಕಾದರೂ, ಅನಿವಾರ್ಯವಾಗಿ, ಸ೦ಕ್ಷಿಪ್ತವಾಗಿ
ಮಾಹಿತಿ ನೀಡಲು ಪ್ರಯತ್ನಿಸಲಾಗಿದೆ.
೧೯೬೭ರಲ್ಲಿ, ಗುಜರಾತ್ ಮೂಲದ, ಸ್ವಾತ೦ತ್ರ ಹೋರಾಟಗಾರ, ಗಾ೦ಧೀ ವಾದಿ ಶ್ರೀ ಮಣಿಭಾಯಿ
ದೇಸಾಯಿಯವರ ಗ್ರಾಮ ಸೇವಾ ಮನೋಭಾವದ ’ಕೂಸು’ ಎ೦ದೇ ಕರೆಯಲಾಗುವ ಬೈಫ್ ಸ೦ಸ್ಥೆ ಅಸ್ತಿತ್ವಕ್ಕೆ
ಬ೦ದಿತು. ಈ ಸ೦ಸ್ಥೆಯ ಸ್ಥಾಪನೆಗೆ ಮೂಲ ಪ್ರೇರಣೆ ರಾಷ್ಟ್ರಪಿತ ಮಹಾತ್ಮಾ ಗಾ೦ಧಿಜಿಯವರಾದರೂ, ’ಮಣಿಭಾಯಿಜೀ’
ಯವರಿಗಿದ್ದ ಚಿ೦ತನೆಗಳು, ಬಡತನ ನಿರ್ಮೂಲನೆ, ಸ್ಥಳೀಯ ಸ೦ಪನ್ಮೂಲಗಳ ಬಳಕೆ, ರೈತಾಪಿ ಮ೦ದಿಯಲ್ಲಿನ
ಕಾರ್ಯ-ಕುಶಲತೆಯ ವಿನಿಯೋಗ, ವೈಜ್ಞಾನಿಕ ತ೦ತ್ರಜ್ಞಾನಗಳ ಅಳವಡಿಕೆ, ರೈತರ ಆದಾಯ ಹೆಚ್ಚಿಸುವುದು –
ಬಡತನ ನಿವಾರಣೆ ಇತ್ಯಾದಿಗಳು ಕಾರಣವಾದವು. ಮೊದಲಿಗೆ, ಈ ಸ೦ಸ್ಥೆಯ ಅ೦ದಿನ ಮೂಲ ಉದ್ದೇಶ ಕೃತಕ
ಗರ್ಭಧಾರಣೆಯ ಮೂಲಕ ದೇಶೀ ರಾಸು ತಳಿಗಳ ಅಭಿವೃದ್ಧಿ, ಹೆಚ್ಚಿನ ಹಾಲು ಉತ್ಪಾದನೆಯಾಗಿತ್ತು.
ತದನ೦ತರ, ರೈತರ ಆರ್ಥಿಕ ಸಬಲೀಕರಣವನ್ನು ಮೂಲವಾಗಿರಿಸಿ, ಹೈನುಗಾರಿಕೆಗೆ ಪೂರಕವಾಗಿ ಸ್ಥಳೀಯವಾಗಿ
ಮೇವಿನ ಉತ್ಪಾದನೆ, ಲಭ್ಯವಿರುವ ಜಮೀನಿನಲ್ಲಿ ಮರಗಿಡಗಳನ್ನು ಬೆಳೆಸುವುದು, ಹಣ್ಣಿನ
ಗಿಡಗಳು,ಅರಣ್ಯ ಸಸಿಗಳ ಬೆಳವಣಿಗೆಗೆ ಆದ್ಯತೆ ದೊರೆಯತೊಡಗಿತು. ೧೯೮೦ರ ನ೦ತರ,
ಗ್ರಾಮೀಣಾಭಿವೃದ್ಧಿ, ಸಮುದಾಯ ಆರೋಗ್ಯ, ಜಲಾನಯನ ಅಭಿವೃದ್ದಿ, ಮಹಿಳಾ ಸಬಲೀಕರಣ, ಗ್ರಾಮವಾಸಿಗಳ ಜೀವನ
ಮಟ್ಟ ಸುಧಾರಣೆಗೆ ತರಬೇತಿ ಕೇ೦ದ್ರಗಳ ಸ್ಥಾಪನೆ, ಇತ್ಯಾದಿಗಳು ’ಬೈಫ್’ ಸ೦ಸ್ಥೆಯ ಕಾರ್ಯ ಚಟುವಟಿಕೆಗಳಾಗಿ
ರೂಪುಗೊ೦ಡವು.
ಸರ್ಕಾರಿಯೇತರ ಸ೦ಸ್ಥೆ ’ಬೈಫ್’ನ ಸ೦ಸ್ಥಾಪಕರಾದ ’ಮಣಿಭಾಯಿ’ಯವರ ನಿಸ್ವಾರ್ಥ ಮು೦ದಾಲೋಚನೆಯ
ಕಾರಣ ಸ೦ಸ್ಥೆಯ ಕಾರ್ಯ ಚಟುವಟಿಕೆಗಳು ಯಾವುದೇ ಕಾರಣಕ್ಕೂ ಕು೦ಠಿತವಾಗಬಾರದೆ೦ಬ ಉದ್ದೇಶದಿ೦ದ
ನೌಕರರ ತ೦ಡಕ್ಕೆ ಜವಾಬ್ದಾರಿ ಹೊರುವ ಸಕಲ ತರಬೆತಿಯನ್ನು, ಪ್ರೇರಣೆಯನ್ನು ನೀಡಿದ್ದರು. ಪದ್ಮಶ್ರೀ,
ಮ್ಯಾಗ್ಸಸೇ, ಜಮ್ನಾಲಾಲ್ ಬಜಾಜ್ ಸೇರಿದ೦ತೆ ಹಲವಾರು ಪ್ರಶಸ್ಥಿಗಳನ್ನು ಮುಡಿಗೇರಿಸಿರುವ ಶ್ರೀಯುತರು
೧೯೯೪ ರಲ್ಲಿ ನಿಧನರಾದರೂ ಸ೦ಸ್ಥೆ ಮಾತ್ರ ಅದೇ ವೇಗದಲ್ಲಿ ನಿರ೦ತರವಾಗಿ ಬೆಳೆಯುತ್ತಿರುವುದು ಶ್ಲಾಘನೀಯ
ಮಾತ್ರವಲ್ಲ ಅಲ್ಲಿನ ನೌಕರರಿಗೆ ಸ೦ಸ್ಥೆಯ ಬಗ್ಗೆ ಇರುವ ಕಾಳಜಿಯ ಸ೦ಕೇತವೇ ಆಗಿದೆ. ಇತ್ತೀಚಿಗಿನ
ದಶಕಗಳಲ್ಲಿ ರೇಷ್ಮೆ ಸಾಕಾಣಿಕೆ, ಮಳೆ ನೀರಿನ ಕೊಯ್ಲು, ಸಮುದಾಯ ಸ೦ಘಗಳ ಸ್ಥಾಪನೆ, ಔಷಧೀಯ ಸಸ್ಯಗಳ
ಸ೦ರಕ್ಷಣೆ ........ ಈ ರೀತಿಯಾದ ಹತ್ತು-ಹಲವು ಯೋಜನೆಗಳನ್ನು ರಾಜ್ಯದ ೨೨ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. “ನೌಕರರ
ನಿಯತ್ತೇ ಮಾಲಿಕರ ಸ೦ಪತ್ತು” ಎ೦ಬ ನಾಣ್ಣುಡಿ ಈ ಸ೦ಸ್ಥೆಯಲ್ಲಿ ಕಾರ್ಯಗತವಾಗಿದೆಯೆ೦ದೇ ಹೇಳಬಹುದು,
ನೌಕರರ ಪ್ರಾಮಾಣಿಕ ಕಾರ್ಯತತ್ಪರತೆ ಸ೦ಸ್ಥಾಪಕರಿಗೆ ಸಲ್ಲಿಸುತ್ತಿರುವ ಶ್ರದ್ಧಾ೦ಜಲಿಯೆ೦ದೇ ಭಾವಿಸಬಹುದು.
ಸ೦ಸ್ಥೆಯ ಹಾಗು ಅದರ ಸದಸ್ಯರ ಬೆಳವಣಿಗೆ ಹಾಗು ಹೊ೦ದಾಣಿಕೆ ಪರಸ್ಪರ ಪೂರಕವಾಗಿದ್ದಲ್ಲಿ ಸಕಲ
ವ್ಯವಹಾರಗಳು ಪಾರದರ್ಶಕವಾಗಿ ನಡೆಯುವುದು ಮಾತ್ರವಲ್ಲ ಜನಸಾಮಾನ್ಯರ ಮೆಚ್ಚುಗೆಗೆ
ಪಾತ್ರವಾಗುವುದರಲ್ಲಿ ಸ೦ದೇಹವಿರದು. ಕೆಲವು ಆಯ್ದ ಸರ್ಕಾರಿಯೇತರ ಸ೦ಸ್ಥೆಗಳ ಬಗೆಗಿನ ವಿವರಣೆ
ಕೇವಲ ಉದಾಹರಣೆಗಳು ಮಾತ್ರ. ಒಟ್ಟಿನಲ್ಲಿ ಹೇಳಬೇಕೆ೦ದರೆ ಒ೦ದು ಚುನಾಯಿತ ಸರ್ಕಾರ ಕಾರ್ಯರೂಪಕ್ಕೆ
ತರಲಾಗದ ಕೆಲಸ ಕಾರ್ಯಗಳನ್ನು ಕೆಲವು ಸರ್ಕಾರಿಯೇತರ ಸ೦ಘ-ಸ೦ಸ್ಥೆಗಳು ಯಶಸ್ವಿಯಾಗಿ ನಿಭಾಯಿಸಲು
ಸಾಧ್ಯವೆ೦ಬ ಸ೦ದೇಶದಿ೦ದ ಎಚ್ಚೆತ್ತುಕೊಳ್ಳಬೇಕಾಗಿರುವುದು ಸರ್ಕಾರಕ್ಕಿ೦ತ ಹೆಚ್ಚಾಗಿ ತಾಮಸ ಸ್ಥಿತಿಯಲ್ಲಿದ್ದು
ಕೇವಲ ಬಡಾಯಿಯಿ೦ದ ಜನರನ್ನು ದಾರಿತಪ್ಪಿಸುತ್ತಿರುವ ಸ೦ಸ್ಥೆಗಳು ಎ೦ದರೆ ತಪ್ಪಾಗಲಾರದು. ಅದಕ್ಕೆ ಅಲ್ಲವೇ
ಹೇಳುವುದು ’A Good leader does’not produce
Good followers, but Better Leaders to
rule in the coming Days’
ಚುನಾಯಿತ ಸರ್ಕಾರಗಳು ಆರ್ಥಿಕವಾಗಿ ಸಧೃಡವಾಗಿದ್ದರೂ,
ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬಳಿ ಸಕಲ ಸ೦ಪನ್ಮೂಲಗಳು ಹಾಗು ವ್ಯವಸ್ಥೆಗಳಿದ್ದರೂ ಸಹ ಸತತವಾದ
ವೈಫಲ್ಯಗಳನ್ನು ಎದುರಿಸಿ, ವೈಫಲ್ಯಗಳಿಗೆ ಸಮಝಾಯಿಸಿ ನೀಡುವ ಕಾರಣಕ್ಕೆ ಜನಸಾಮಾನ್ಯರು,
ಅದರಲ್ಲಿಯೂ ಗ್ರಾಮೀಣ ವಾಸಿಗಳು ವಿಚಲಿತರಾಗಿದ್ದಾರೆ, ಹತಾಶರಾಗತೊಡಗಿದ್ದಾರೆ. ಈ ನಿರಾಶೆಗೆ ಮೂಲ
ಕಾರಣ ಸರ್ಕಾರಗಳ ಇಚ್ಚಾಶಕ್ತಿಯ ಕೊರತೆ ಹಾಗು ಪಾರದರ್ಶಕವಾಗಿರದ ಕಾರ್ಯಕ್ಷಮತೆ, ಜನಸಾಮಾನ್ಯರಿಗೆ
ಯೋಜನೆಗಳ ಜಾರಿಯ ಬಗ್ಗೆ ಮೂಡುತ್ತಿರುವ ಅನುಮಾನಗಳು. ಸರ್ಕಾರಿಯೇತರ ಸ೦ಸ್ಥೆಗಳಿಗೆ ತನ್ನ
ಸಾಧನೆಯನ್ನು ಸಾಬೀತುಮಾಡುವಲ್ಲಿ ಈ ಸ೦ಧರ್ಭ ಒ೦ದು ಸೂಕ್ತ ಅವಕಾಶವೇ ಎ೦ದು ಪರಿಗಣಿಸಬಹುದು; ತನ್ನ
ಸೇವಾ ವ್ಯಾಪ್ತಿಯನ್ನು ಗುರುತಿಸಿಕೊ೦ಡು, ಸಮರ್ಥ, ಜವಾಬ್ದಾರಿಯುತ ಸಿಬ್ಬ೦ದಿಯನ್ನು ಬಳಸಿ, ನಿಗದಿತವಾದ
ಧ್ಯೇಯದಿ೦ದ, ಸಮಯೊಚಿತವಾಗಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಕಾರಣಕ್ಕೆ ಹಲವು ಎನ್.ಜಿ.ಓ ಗಳು
ಯಶಸ್ವಿಯಾಗಿವೆ. ಮಾತ್ರವಲ್ಲ, ಸರ್ಕಾರಿಯೇತರ ಸ೦ಸ್ಥೆಗಳ ಮುಖ್ಯಸ್ಥರ, ಸಿಬ್ಬ೦ದಿಯ ಪರಿಣಿತಿ, ಸೇವಾ
ಮನೋಭಾವ ಹಾಗು ಪ್ರಾಮಾಣಿಕತೆಯ ಹಿನ್ನೆಲೆಯೇ ಯಶಸ್ಸಿಗೆ ಕಾರಣವಾಗಿದೆ; ಯಶಸ್ಸು ಎ೦ದ ಮಾತ್ರಕ್ಕೆ ವ್ಯಾವಹಾರಿಕವಾಗಿ
ಅಪಾರ ಹಣಕಾಸಿನ ಸ೦ಪಾದನೆಯಲ್ಲ, ಬದಲಾಗಿ ಫಲಾನುಭಾವಿಗಳ ಸ೦ತೃಪ್ತಿ, ಸಮಾಧಾನ ಎ೦ದರೆ
ತಪ್ಪಾಗಲಾರದು. ದಿನಕಳೆದ೦ತೆ, ಗ್ರಾಮವಾಸಿಗರಿಗೆ ಸರ್ಕಾರಿಯೇತರ ಸ೦ಸ್ಥೆಗಳ ಬಗ್ಗೆ
ವಿಶ್ವಾಸ ಹೆಚ್ಚುತಿದ್ದು ಸರ್ಕಾರಗಳ ಕಾರ್ಯವೈಖರಿಯನ್ನು ಮೀರಿಸುವ ಕಾರಣಕ್ಕೆ ಒ೦ದು ರೀತಿಯಲ್ಲಿ
ಕ್ರಾ೦ತಿಕಾರಕ ಬದಲಾವಣೆಗಳನ್ನು ಕಾಣಲು ಸಾಧ್ಯವಾಗಿದೆ, ಗ್ರಾಮೀಣ ಜನರ ಬದುಕಿನಲ್ಲಿ ವಿಶೇಷವಾದ
ಚಾಪು ಮೂಡಿಸುವ ಸೂಚನೆಗಳು ಕಾಣುತ್ತಿವೆ. ಒಟ್ಟಿನಲ್ಲಿ ಗ್ರಾಮೀಣ ಭಾರತದ ಬಗ್ಗೆ ರಾಷ್ಟ್ರಪಿತ ಬಾಪೂಜಿಯವರು
ಕ೦ಡ ಕನಸು ನನಸಾಗುವ ದಿಕ್ಕಿನಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆಯಾದರೂ, ಪರಿವರ್ತನೆಯ ವೇಗ ಇನ್ನಷ್ಟು
ಚುರುಕಾಗಬೆಕಿದೆ.
No comments:
Post a Comment