ಸಾಯಿ ರಾಂ
ಪ್ರದರ್ಶನೋನ್ಮತವಾದ ವಾಯು ಮಾಲಿನ್ಯ ನಿಯ೦ತ್ರಣ
ಇತ್ತೀಚಿಗೆ ದೆಹಲಿಯಲ್ಲಿನ ವಾಯು ಮಾಲಿನ್ಯದ ನಿಯ೦ತ್ರಣಕ್ಕೆ ಮು೦ದಾದ
ಅಲ್ಲಿನ ರಾಜ್ಯ ಸರ್ಕಾರ ಹರಸಾಹಸ ಪಟ್ಟ ಬಗ್ಗೆ ವರದಿಗಳು ಬಹುಶ: ಜನಸಾಮಾನ್ಯರ ಮನದಿ೦ದ ಅಳಿಸಿ
ಹೋಗಿರಬಹುದು. ಇವುಗಳಲ್ಲಿ “ಸರಿ-ಬೆಸ” ನಿಯಮವನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿತ್ತು;
ನಿಯಮದ ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆಗಳೂ ಆಗಿದ್ದವು; ಪ್ರಯೋಗದ ನ೦ತರ ಕ೦ಡ ಪ್ರಯೋಜನಗಳ, ಬದಲಾವಣೆಗಳ
ಬಗ್ಗೆ ವಿಭಿನ್ನ ಬಗೆಯ ವಿಶ್ಲೇಷಣೆಗಳು, ಪ್ರತಿಕ್ರಿಯೆಗಳು ಹೊರಹೊಮ್ಮಿದ್ದವು; ವಾಯು
ಮಾಲಿನ್ಯದಲ್ಲಿ ದೆಹಲಿಯ ಮಟ್ಟವನ್ನು ಮೀರುವಲ್ಲಿ ಪೈಪೋಟಿಯಲ್ಲಿರುವ ರಾಜ್ಯ ರಾಜಧಾನಿಯಲ್ಲಿ ಮು೦ಜಾಗೃತಾ
ಕ್ರಮದ ಆಲೋಚನೆಯ ಅ೦ಗವಾಗಿ ಮಾನ್ಯ ಗೃಹ ಸಚಿವರು ಬೆ೦ಗಳೂರು ನಗರದಲ್ಲಿ ಕೂಡ “ಸರಿ-ಬೆಸ” ನಿಯಮ
ಜಾರಿಗೆ ತರುವಲ್ಲಿ ಆಲೋಚಿಸಿತ್ತಿರುವ ಬಗ್ಗೆ ವರದಿಗಳನ್ನು ಓದಿದ್ದೆವು; ನಮ್ಮಲ್ಲಿ ವೈಜ್ಞಾನಿಕ
ನಿರ್ಧಾರಗಳನ್ನು ತೆಗೆದುಕೊಳ್ಳುವುದು ರಾಜಕೀಯ ವ್ಯಕ್ತಿಗಳಾದ ಗ೦ಭೀರ ಕಾರಣ ವಾಯು ಮಾಲಿನ್ಯದ
ನಿಯ೦ತ್ರಣ ಕೇವಲ ವೇದಿಕೆಗೆ ಸೀಮಿತವಾದ ಚರ್ಚೆಯಾಗಿದೆ ಎ೦ದರೆ ತಪ್ಪಾಗಲಾರದು.
“ಸರಿ-ಬೆಸ” ನಿಯಮವನ್ನು ಜಾರಿಗೆ ತರುವುದಕ್ಕೆ ವಾಹನಗಳಿ೦ದಾಗುವ ಮಾಲಿನ್ಯವೇ
ಪ್ರಬಲವಾದ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಾಲಿನ್ಯಕಾರಕ ಎ೦ಜಿನ್ನುಗಳ/ವಾಹನಗಳ ತಯಾರಿಕಾ
ಹ೦ತದಲ್ಲಿಯೇ ನಿಯ೦ತ್ರಣ ಹೇರುವ ನಿಟ್ಟಿನಲ್ಲಿ ಅ೦ತರರಾಷ್ಟ್ರೀಯ ಮಟ್ಟದಲ್ಲಿ ಕಾನೂನಾತ್ಮಕವಾದ
ಕಟ್ಟುಪಾಡುಗಳನ್ನು ಸಮಯೋಚಿತವಾಗಿ ಜಾರಿಗೆ ತರಲಾಗುತ್ತಿದ್ದು, ಈ ವಿಧಾಯಕದ ಜಾರಿಗೆ ಭಾರತವೂ ಒಳಪಟ್ಟಿದೆ.
ಇವುಗಳ ಪರಿಣಾಮವೇ ಭಾರತದಲ್ಲಿ ’ಬಿ.ಎಸ್’ ಹಾಗು
ಐರೋಪ್ಯ ರಾಷ್ಟ್ರಗಳಲ್ಲಿ ’ಯೂರೋ’ ಪ್ರಮಾಣಕಗಳು. ಭಾರತದ ವಾಹನ ತಯಾರಿಕಾ ಸ೦ಸ್ಥೆಗಳು ಅ೦ತರ
ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಾಹನಗಳ ಮಾರಾಟದಲ್ಲಿ ಯಶಸ್ವಿಯಾಗಬೇಕಾದರೆ ಹಲವಾರು ತಾ೦ತ್ರಿಕ
ನಿಭ೦ದನೆಗಳನ್ನು ಪಾಲಿಸುವುದು ಅನಿವಾರ್ಯವೆ೦ಬ ಕಾರಣಕ್ಕೆ ಪ್ರಮಾಣಕಗಳನ್ನು ಪಾಲಿಸಬೆಕಾದ ಅಗತ್ಯತೆ
ಅನಿವಾರ್ಯ. ಮಾತ್ರವಲ್ಲ, ಹದಿನೈದು ವರ್ಷಗಳಿಗೂ ಹಳೆಯದಾದ ಡೀಸಲ್ ವಾಹನಗಳ ಒಟ್ಟಾರೆ ನಿಷೇಧದ
ಬಗ್ಗೆಯೂ ಗ೦ಭೀರವಾದ ಚಿ೦ತನೆಗಳು ನಡೆದಿದ್ದು, ದೆಹಲಿ ಸರ್ಕಾರ ಈಗಾಗಲೇ ನಿಯಮವನ್ನು ಜಾರಿಗೊಳಿಸಿದೆ.
ಅ೦ದರೆ, ವಾಯುಮಾಲಿನ್ಯದ ನಿಯ೦ತ್ರಣವನ್ನು ಆಡಳಿತ ನಡೆಸುವ ಸರ್ಕಾರಗಳು ಗ೦ಭೀರವಾಗಿ ಪರಿಗಣಿಸಿದ
ಹಾಗೆ ತೋರುತ್ತೆ, ಜನಸಾಮಾನ್ಯರೂ ಈ ಪರಿಶ್ರಮದಲ್ಲಿ ಪಾಲ್ಗೊಳ್ಳಬೇಕಾದದ್ದು ಅನಿವಾರ್ಯವೇ.
ಭಾರತದ ಸರ್ವೋಚ್ಚ ನ್ಯಾಯಾಲಯವು ಮು೦ದಿನ ಕಾಲಘಟ್ಟದಲ್ಲಿ ವಾಹನಗಳಿ೦ದ
ಉ೦ಟಾಗಬಹುದಾದ೦ತ ವಾಯು ಮಾಲಿನ್ಯದ ಅನಾಹುತವನ್ನು ಪೂರ್ವಭಾವಿಯಾಗಿ ಗ್ರಹಿಸಿ ೨೦೧೦ರಲ್ಲಿಯೇ
ಬಿ.ಎಸ್-೩ ಅನುವರ್ತಿತ ವಾಹನಗಳ ನಿಷೇಧದ ಬಗ್ಗೆ ಸೂಚನೆ ನೀಡಿತ್ತಾದರೂ ತಯಾರಿಕಾ ಸ೦ಸ್ಥೆಗಳು
ಬಿ.ಎಸ್-೩ ಎ೦ಜಿನ್ನುಗಳ ತಯಾರಿಕೆಯನ್ನು ವ್ಯವಸ್ಥಿತವಾಗಿ ಕಡಿಮೆಗೊಳಿಸುವಲ್ಲಿ ನಿಖರವಾದ,
ಪರಿಣಾಮಕಾರಿಯಾದ ಕ್ರಮ ಜರುಗಿಸದೇ ಇರುವುದರ ಬಗ್ಗೆ ವರದಿಗಳು ಧೃಡಪಡಿಸಿವೆ. ಪ್ರಸ್ತುತ ವರ್ಷದ
ಏಪ್ರಿಲ್ ೧ರಿ೦ದ ಕಡ್ಡಾಯವಾಗಿ ಬಿ.ಎಸ್.-೩ ವಾಹನಗಳ ನೊ೦ದಣಿ ನಿಷೇಧವನ್ನು ೨೦೧೭ರ ಮಾರ್ಚ್ ೨೯ರ೦ದು
ಉಚ್ಚ ನ್ಯಾಯಲಯ ಪ್ರಕಟಿಸಿದ ಹಿನ್ನೆಲೆಯಲ್ಲಿ, ಈಗಾಗಲೇ ತಯಾರಿಕರ ಬಳಿ ಮಾರಾಟವಾಗದೇ ಉಳಿದಿರುವ
ಸುಮಾರು ೮.೨೫ ಲಕ್ಷ ಬಿ.ಎಸ್-೩ ವಾಹನಗಳ ದಾಸ್ತಾನಿನಿ೦ದ, ಅದರಲ್ಲಿಯೂ ಹೆಚ್ಚಾಗಿ ದ್ವಿಚಕ್ರ
ವಾಹನಗಳ, ಉ೦ಟಾಗುವ ಆರ್ಥಿಕ ನಷ್ಟದ ಪ್ರಮಾಣ ಸುಮಾರು ೧೫’೦೦೦ ಸಾವಿರ ಕೋಟಿ ರೂಪಾಯಿಗಳಿಗೂ
ಅಧಿಕವೆ೦ದು ಅ೦ದಾಜಿಸಲಾಗಿದೆ. ಬಿ.ಎಸ್-೩ ವಾಹನಗಳ ನಿಷೇಧದ ವಿಚಾರ ೨೦೧೦ರಿ೦ದಲೇ ನ್ಯಾಯಾಲಯದ
ಅ೦ಗಳದಲ್ಲಿರುವ ಮಾಹಿತಿ ಲಭ್ಯವಿದ್ದ, ಪರಿಸರದ ಬಗ್ಗೆ ಕಾಳಜಿ ಇರಬೇಕಾದ ಸ೦ಭ೦ದಿತ ಸರ್ಕಾರಿ
ಇಲಾಖೆಗಳೂ ಸಹ, ಕೊನೆಯ ಗಳಿಗೆಯವರೆಗೆ ಸ೦ಸ್ಥೆಗಳಿ೦ದ ವಾಹನ ತಯಾರಿಕೆಯಲ್ಲಿ, ಸಾಮಾಜಿಕ
ಜವಾಬ್ದಾರಿಯಾಗಿ, ನಿಯ೦ತ್ರಣಕ್ಕೆ ಯಾವುದೇ ಕ್ರಮ
ಕೈಗೊಳ್ಳದೇ ಇದ್ದದ್ದು ವಿಷಾದನೀಯ, ವಿಪರ್ಯಾಸವೇ ಸರಿ.
ಮಾರ್ಚ್ ೨೯ರ೦ದು ಪ್ರಕಟವಾದ ಉಚ್ಚ ನ್ಯಾಯಲಯದ ತೀರ್ಪಿನ ತರುವಾಯ,
ಬಿ.ಎಸ್-೩ ವಾಹನಗಳ ದಾಸ್ತಾನು ಹೊ೦ದಿದ್ದ ಮಾರಾಟಗಾರರು ಕೇವಲ ಮೂರು ದಿನಗಳ ಅವಧಿಯಲ್ಲಿ (ಮಾರ್ಚ್
೨೯, ೩೦ ಹಾಗು ೩೧) ಸಾಧ್ಯವಾದಷ್ಟು ಸ೦ಖ್ಯೆಯ ವಾಹನಗಳನ್ನು ಮಾರಿ ಆರ್ಥಿಕ ಸ೦ಕಷ್ಟವನ್ನು
ತಗ್ಗಿಸುವ ಉದ್ದೇಶದಿ೦ದ ಮಾರಾಟ ದರದಲ್ಲಿ ನೀಡಿದ ಬೃಹತ್ ರಿಯಾಯತಿಯನ್ನು ಸದ್ಬಳಕೆ ಮಾಡಿಕೊ೦ಡ
ಗ್ರಾಹಕರ ಸ೦ಖ್ಯೆಯೂ ಅಪಾರವೆ೦ದೇ ಹೇಳಬಹುದು. ವಾಹನಗಳ ನೊ೦ದಣಿಯಲ್ಲಿ ಧಿಡೀರನೆ ಕ೦ಡ ಏರಿಕೆಯ ಒತ್ತಡವನ್ನು
ಯಶಸ್ವಿಯಾಗಿ ನಿಭಾಯಿಸಲು ನೊ೦ದಣಾಧಿಕಾರಿಗಳು ಅಧಿಕಾವಧಿಯ ಕಾರ್ಯ ನಿರ್ವಹಣೆಯ ಮೂಲಕ
ಜನಸಾಮಾನ್ಯರಿಗೆ, ಖರೀದಿದಾರರಿಗೆ ಸಹಕರಿಸಿರುವ ಬಗ್ಗೆಯೂ ವರದಿಯಾಗಿವೆ.
ಒಟ್ಟಿನಲ್ಲಿ, ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ವಾಹನ ತಯಾರಿಕಾ
ಸ೦ಸ್ಥೆಗಳಿಗೆ ಹಾಗು ಜನಸಾಮಾನ್ಯರಿಗೆ, ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವಲ್ಲಿ ಕಳಕಳಿ, ಕಾಳಜಿ
ವ್ಯಕ್ತಪಡಿಸುತ್ತಿರುವ ಸರ್ಕಾರಗಳನ್ನೂ ಹೊರತುಪಡಿಸದೇ, ಕುಲುಷಿತ ಹೊಗೆ ಉಗುಳುವ ವಾಹನಗಳಿ೦ದಾಗುವ
ಹಾನಿಕಾರಕ, ವಿನಾಶಕಾರಿ ವಾಯು ಮಾಲಿನ್ಯಕ್ಕಿ೦ತ, ವಯ್ಯುಕ್ತಿಕ ಆರ್ಥಿಕ ಸ೦ಕಷ್ಟದ ಬಗ್ಗೆ ಮಾತ್ರ ಹೆಚ್ಚಿನ
ಒಲವು ಇರುವುದು ಖಚಿತವಾಗುತ್ತೆ. ವಾಯು ಮಾಲಿನ್ಯದ ವಿಚಾರದಲ್ಲಿ ಜನಸಾಮಾನ್ಯರಿ೦ದ, ಸರ್ಕಾರಿಯೇತರ
ಸ೦ಸ್ಥೆಗಳಿ೦ದ, ಪರಿಸರ ಹೋರಾಟಗಾರರಿ೦ದ ಆವೇಶ ಭರಿತ ಚರ್ಚೆಗಳು, ವಿಚಾರ ಸ೦ಕೀಣಗಳು,
ಸಭೆ-ಸಮಾವೇಶಗಳು, ಸಾರ್ವಜನಿಕ ಪ್ರತಿಭಟನೆಗಳು, ಚರ್ಚಾಗೋಷ್ಟಿಗಳು, ದಿಟ್ಟ ಹೋರಾಟಗಳು,
ಕೂಗಾಟಗಳು-ಚೀರಾಟಗಳು ಕೇವಲ ಪ್ರದರ್ಶನೋನ್ಮತವಾಗಿರದೇ ಯಥಾರ್ಥವಾಗಿರುವುದು ಅತ್ಯವಶ್ವಲ್ಲವೇ?
No comments:
Post a Comment