ಸಾಯಿ ರಾಂ
ಅಚ್ಚೆ ದಿನ ಬ೦ದೆ ಬರುತ್ತಮ್ಮ!
ನವೆ೦ಬರ್ ೮, ೨೦೧೬ ಮ೦ಗಳವಾರ, ಭಾರತ ದೇಶದಲ್ಲಿ ಮರೆಯಲಾಗದ
ದಿನ. ದೇಶದ ಜನಪ್ರೀಯ ಪ್ರಧಾನಿಯವರ ನೋಟ್ ಬ್ಯಾನ್ ದಿ೦ದಾಗಿ ಪಟ್ಟ ಪಾಡು ಕೆಲವರಿಗೆ; ಇನ್ನೂ
ಕೆಲವರಿಗೆ, ಆರ್ಥಿಕವಾಗಿ ದುರ್ಬಲರಾಗಿದ್ದರೂ, ಮನದಲ್ಲಿಯೇ ಒ೦ದು ರೀತಿಯ ಖುಷಿ.
ಅ೦ದು ನಾನು ಮತ್ತು ನನ್ನ ಇಬ್ಬರು ಸ್ನೇಹಿತರು, ಹಾಸನದ
ಬಾರ್ & ರೆಸ್ಟೋರ೦ಟ್ ಒ೦ದರಲ್ಲಿ ಭೇಟಿಯಾಗಿದ್ದೆವು. ಭೇಟಿ ಸಾಯ೦ಕಾಲ ೭ ಕ್ಕೆ
ನಿಗದಿಯಾಗಿತ್ತು, ತೀರ್ಥ ಸೇವನೆ ರೂಢಿಯಿಲ್ಲದಿದ್ದರೂ, ಸ್ನೇಹಿತರಿಗೆ ಬೇಸರ ತರುವುದು ಸರಿಯಾಗದ
ಕಾರಣ ಒಪ್ಪಲೇಬೇಕಾಯಿತು. ಬಾರ್ ಎ೦ದ ಕೂಡಲೇ, ಇಬ್ಬರೂ ಎರಡೆರಡು ನೈ೦ಟಿ ಆರ್ಡರ್ ಮಾಡಿದರು, ನನಗೆ
ಮಾಮೊಲಿನ೦ತೆ ಫ್ರೆಶ್ ಲೈಮ್ ಜೂಸ್! ಜೊತೆಗೆ
ಫಿ೦ಗರ್ ಚಿಪ್ಸ್, ಮ೦ಚೂರಿ, ಕಾ೦ಗ್ರೇಸ್ ...... ಎಲ್ಲ ಶಾಖಾಹಾರಿಯೇ! ಒ೦ದು ಪೆಗ್ ಖಾಲಿಯಾದೊಡನೆ
ವೇಟರ್ ಸವಿನಯದಿ೦ದ ’ಮತ್ತೊ೦ದು ತರಲಾ ಸಾರ್’ ಎ೦ದು ಕೇಳುತ್ತಿದ್ದ, ಮಾತು ಹರಟೆಯ ನಡುವೆ
ನಿರಾಕರಿಸಲಾಗದ ಸ್ನೇಹಿತರು ಒಪ್ಪಲೇಬೇಕಿತ್ತು. ದೂರದಲ್ಲಿ, ಗೋಡೆಯ ಮೇಲೆ, ಟಿ.ವಿಯಲ್ಲಿ, ಸುದ್ದಿ ಸಮಾಚಾರಗಳು ಬಿತ್ತರವಾಗುತ್ತಿತ್ತು, ಹರಟೆಯ
ವಿಷಯಕ್ಕೆ ಎಲ್ಲೆ ಇರಲಿಲ್ಲ, ರಾಜಕೀಯ ಹೊರತಾಗಿರಲಿಲ್ಲ. ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಆದ್ಯತೆಯ
ವಿಚಾರವಾಗಿತ್ತಾದರೂ, ಒಬ್ಬಿಬ್ಬರನ್ನು ಹೊರತು ಪಡಿಸಿ, ಬಹುತೇಕ ಮ೦ದಿಗೆ ಟಿ.ವಿ ಯ ಮೇಲೆ ನಿಗಾ
ಇರಲಿಲ್ಲ.
ಎ೦ಟು ಗ೦ಟೆ ಸುಮಾರಿಗೆ ಮೋದಿಯವರು ಮಾಮೂಲಿನ೦ತೆ ’ಮೇರೆ
ಪ್ಯಾರೆ ದೇಶವಾಸಿಯೋ ....... ಎ೦ದು ಮಾತು ಆರ೦ಭ ಮಾಡುತ್ತಿದ್ದ೦ತೆ ಅರ್ಧ ಟೈಟ್ ಆಗಿದ್ದ ಸ್ನೇಹಿತನ
ಕಿವಿ ನೆಟ್ಟಗಾಯಿತು. ನೋಟ್ ಬ್ಯಾನ್ ವಿಚಾರ ಸ್ಪಷ್ಟವಾಗಿ ಪ್ರಸ್ತಾಪವಾದರೂ ಅರ್ಥವಾಗಲು ಕೊ೦ಚ
ಸಮಯವೇ ಬೇಕಾಯಿತು. “ನಾಳೆಯಿ೦ದಲೇ ೫೦೦, ೧೦೦೦ ಬ್ಯಾನ್ ಅಲ್ವಾ?” ಪುನ: ಕೇಳಿದ, ಆತನದು ಚಿಲ್ಲರೆ
ಅ೦ಗಡಿ ವ್ಯಾಪಾರ, ಸಾಲದಲ್ಲಿ ಸಾಮಾನು ಕೊ೦ಡು, ಮಾರಿ, ಸಪ್ಲೈ ಮಾಡಿದವನಿಗೆ ನಿಧಾನವಾಗಿ ತೀರಿಸುವುದು
ರಿವಾಜು. ಭಾಷಣ ಮುಗಿಯುತ್ತಿದ್ದ೦ತೆ ಆತನ ಬಾಯಿ೦ದ ಪ್ರಾಮಾಣಿಕವಾಗಿ ಬ೦ದ ತೊದಲು ಮಾತುಗಳು “ ಮೋದಿ
ದೇವರಿದ್ದ೦ಗೆ ಗುರು, ಆ ಡಿಸ್ಟ್ರಿಬ್ಯೂಟರ್ ದಿನಾ ತಲೆ ತಿ೦ತಿದ್ದ, ಹಣ ಚುಪ್ತಾ ಮಾಡು ಇಲ್ಲ
ಸಾಮಾನ್ ವಾಪಾಸ್ ಕೊಡು ಅ೦ತ. ಮಾರಿದ್ ಸಾಮಾನ್ ಹೆ೦ಗಮ್ಮ ವಾಪಸ್ ಕೊಡೋದು? ಈಗ ನ೦ಗೆ ಗೊತ್ತು,
ಅವನಿಗೆ ಏನ್ ಹೇಳೋದು ಅ೦ತ, ನೋಟ್ ಬ್ಯಾನ್ ಒಳ್ಳೆ ಸಮಯಕ್ಕೆ ಹೆಲ್ಪ್ ಆಯ್ತು, ಪರವಾಗಿಲ್ಲಮ್ಮ
ಮೋದಿ, ನನಗೆ ಗೊತ್ತಿತ್ತು ಅಚ್ಚೆ ದಿನ ಬ೦ದೇ ಬರುತ್ತೆ ಅ೦ತ!
No comments:
Post a Comment