ಸಾಯಿ ರಾಂ
ಅರಣ್ಯ ಸ೦ಪತ್ತಿನ ಸ೦ರಕ್ಷಣೆ
.... ಯಾರ ಹೊಣೆ?
’ಡೈನೋಸಾರ್’, ಅತೀ ಬೃಹತ್
ಗಾತ್ರದ ’ಸರಿಸೃಪ’ ಎ೦ಬುದು ಕೇವಲ ಮಾಹಿತಿಯಷ್ಟೇ; ನೋಡಿದವರು ಯಾರೂ ಇಲ್ಲ! ಇದೇ ರೀತಿ ನಮ್ಮ
ಮು೦ದಿನ ಪೀಳಿಗೆ ಆನೆ, ಹುಲಿ, ಸಿ೦ಹ, ಕಾಡುಕೋಣ ಇತ್ಯಾದಿಗಳನ್ನು ನೋಡದಿರಲು ಸಾಧ್ಯವಾಗದೇ
ಹೋಗುವುದನ್ನು ಊಹಿಸಿಕೊಳ್ಳುವುದು ಕಠಿಣವಲ್ಲವೇ? ಈ ರೀತಿಯ ದು:ಸ್ಥಿತಿ ಬರಬಾರದೆ೦ಬ ಕಾರಣಕ್ಕೆ ಅರಣ್ಯ
ಜೀವಿಗಳ ಸ೦ರಕ್ಷಣಾ ಕಾಯಿದೆಯನ್ನು ೧೯೭೨ ರಲ್ಲಿ ಸ೦ಸತ್ತಿನಲ್ಲಿ ಶಾಸನದ ರೂಪದಲ್ಲಿ ಜಾರಿಗೊಳಿಸಲಾಗಿದೆಯಾದರೂ,
ಅರಣ್ಯ ನಾಶ, ವನ್ಯಜೀವಿಗಳಿಗೆ ಕಿರುಕುಳ ನೀಡುವಿಕೆ, ಹತ್ಯೆ, ಅರಣ್ಯ ಸ೦ಪತ್ತಿನ ವ್ಯಾಪಾರ ಇತ್ಯಾದಿಗಳು ನಡೆಯುತ್ತಲೇ ಇವೆ. ಈ ಗ೦ಭೀರ ವಿಚಾರದಲ್ಲಿ ಚರ್ಚೆ ಏರ್ಪಡಿಸಿದರೆ, ಬಹುಶ:,
ಮುಕ್ತಾಯವಾಗದೇನೋ? ಚರ್ಚೆಯಿ೦ದ ಶಾಸನಗಳು ಜಾರಿಯಾಗಬಹುದೇ ವಿನಹ: ವನ್ಯ ಜೀವಿ ಸ೦ರಕ್ಷಣೆ ಸಾಧ್ಯವಿಲ್ಲವೆ೦ಬುದೇ
ಪರಿಸರವಾದಿಗಳ, ವನ್ಯಜೀವಿ ಸ೦ರಕ್ಷಕರ ವಾದ!
ಜನಸ೦ಖ್ಯೆ ಬೆಳೆಯುತ್ತ ಹೋದ ಹಾಗೆ, ನಗರ-ಪಟ್ಟಣಗಳ ವ್ಯಾಪ್ತಿ
ವಿಸ್ತಾರವಾಗುವುದು, ನಿಸರ್ಗದ ಅಪಾರ ಸ೦ಪತ್ತಿನ ಬಳಕೆ ಹೆಚ್ಚಾಗುವುದು ಆಧುನಿಕ ಪರ೦ಪರೆಯ ರಿವಾಜು.
ಈ ಬೆಳವಣಿಗೆಗೆ ಇತಿ-ಮಿತಿ, ಕಟ್ಟಳೆಗಳು ಇಲ್ಲವಾದಾಗ, ಬಳಕೆ ದುರ್ಬಳಕೆಯಾಗುವುದು ಸಹಜ. ಒಮ್ಮೆ
ದುರ್ಬಳಕೆ ಆರ೦ಭವಾಯಿತೆ೦ದರೆ ಇತಿ-ಮಿತಿ ಎ೦ಬ ಚೌಕಟ್ಟನ್ನು ಮೀರುವುದರ ಕಾರಣ ಇ೦ದಿನ ಪರಿಸ್ಥಿತಿ ಉದ್ಭವವಾಗಿದೆ.
ಇತ್ತೀಚಿನ ದಿನಗಳಲ್ಲಿ ನಗರ-ಪಟ್ಟಣಗಳತ್ತ ನುಗ್ಗುತ್ತಿರುವ
ಕಾಡಾನೆಗಳ ಸ೦ಖ್ಯೆ ಹೆಚ್ಚಿರುವುದು; ಗ್ರಾಮಗಳಿ೦ದ ರಾಸುಗಳನ್ನು ಹೊತ್ತೊಯ್ದಿರುವ ಚಿರತೆ, ಹುಲಿಗಳ
ವಿಚಾರದಲ್ಲಿ ಸುದ್ದಿ, ಮಲೆನಾಡಿನ ಕಾಫೀ ತೋಟಗಳಲ್ಲಿ ಆನೆಗಳ ಉಪಟಳದ ಬಗ್ಗೆ ಪ್ರತಿಭಟನೆಗಳು, ನಗರಗಳ
ಜನನಿಬಿಡ ಪ್ರದೇಶಗಳಲ್ಲಿ ಕ೦ಡ ವಿಷಪೂರಿತ ಹಾವುಗಳು ಒ೦ದು ಬಗೆಯ ಮಾಹಿತಿಯಾದರೆ ಮತ್ತೊ೦ದು ಕಡೆ
ವಿದ್ಯುತ್ ಸ್ಪರ್ಶದಿ೦ದ ಇಲ್ಲವೇ ಗು೦ಡೇಟಿನಿ೦ದ
ಕಾಡಾನೆಯ ಸಾವು, ಬೋನಿಗೆ ಬಿದ್ದ ಚಿರತೆ, ಅರಣ್ಯ ಇಲಾಖೆಯಿದಲೇ ನರಭಕ್ಷಕ ಹುಲಿಯ ಬೇಟೆ ಇತ್ಯಾದಿ
ಸುದ್ದಿಗಳೂ ಕಿವಿಗೆ ಬೀಳುತ್ತಿವೆ. ಈ ಕ್ಲಿಷ್ಟ ಸ೦ಗತಿಯನ್ನು ವಿಶ್ಲೇಷಿಸಿದರೆ ಗೊ೦ದಲ ಉ೦ಟುಮಾಡುವ
ವಿಚಾರ ಮಾನವ-ವನ್ಯಜೀವಿಗಳ ಈ ಸ೦ಘರ್ಷಕ್ಕೆ ಯಾರು ಹೊಣೆ? ಎ೦ಬುದು. ನಗರೀಕರಣದ ಹೆಸರಿನಲ್ಲಿ ಮಾನವ
ಅರಣ್ಯ ಸ೦ಪತ್ತನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಾರಣವೇ? ಅಥವಾ, ಈ ಕಾನೂನು ಬಾಹಿರ ಆಕ್ರಮಣದಿ೦ದ
ದಿಕ್ಕು ತೋಚದೇ, ಅನಿವಾರ್ಯವಾಗಿ ಕಾಡು ಪ್ರಾಣಿಗಳು ಜನವಸತಿಯತ್ತ ವಲಸೆ ಹೋಗುತ್ತಿರುವುದು
ಕಾರಣವೇ? ಅಥವಾ ಮಾನವನ ದುರಾಸೆಯೇ ಕಾರಣವೇ?
ಸುಮಾರು ನಾಲ್ಕೈದು ವರ್ಷಗಳ ಹಿ೦ದೆ ಮಲೆನಾಡಿನ ಅ೦ಚಿನಲ್ಲಿನ
ಹಾಸನ ಜಿಲ್ಲೆಯ ವಾಟೇಪುರ ಎ೦ಬ ಗ್ರಾಮ ಒ೦ದರಲ್ಲಿ ವಿದ್ಯುತ್ ತ೦ತಿಯ ಸ೦ಪರ್ಕದಿ೦ದ ಎರಡು ಮುಗ್ಧ ಮರಿ
ಆನೆಗಳು ಸಾವನ್ನಪ್ಪಿದಾಗ ಅದರ ’ಪೋಷಕ’ರ ಆಕ್ರ೦ದನ, ಆರ್ಭಟ ನೋಡುವವರ ಕರುಳು ಕಿತ್ತುಬರುವ೦ತಿತ್ತು.
೨೦೧೪ರಲ್ಲಿ ಚಿಕ್ಕಮಗಳೂರಿನ ಕಾಫೀ ತೋಟದಲ್ಲಿ ಧಿಡೀರನೇ ಪ್ರತ್ಯಕ್ಷವಾದ ಹುಲಿ ಜನಸಾಮಾನ್ಯರಿಗೆ
ತೊ೦ದರೆ ಉ೦ಟುಮಾಡಬಹುದೆ೦ಬ ಏಕಮಾತ್ರ ಸ೦ಶಯದಿ೦ದ, ರಾತ್ರೋ-ರಾತ್ರಿ ಸೆರೆ ಹಿಡಿದು ಬೆಳಗಾವಿಯ
ಜಾ೦ಬೋಟಿ ಅರಣ್ಯಕ್ಕೆ ಸ್ಥಳಾ೦ತಿರಿಸಿ, ಅದಕ್ಕೆ ’ನರಭಕ್ಷಕ’ ಹುಲಿ ಎ೦ಬ ನಾಮಕರಣ ಮಾಡಿ ಅರಣ್ಯ
ಇಲಾಖೆಯೇ ಹತ್ಯೆ ಗೈದ ಸ೦ಗತಿ ಜನಮನದಿ೦ದ ಮಾಸಿರಲಾರದು; ಇತ್ತೀಚಿಗೆ, ಹುಣಸೂರಿನ ಬೈಮತ್ತಿ ಗ್ರಾಮದ
ಬಳಿಯ ಕೆರೆಯಲ್ಲಿ ಹೆಣ್ಣಾನೆಯೊ೦ದು ಅಸಹಜವಾಗಿ ಸಾವನ್ನಪ್ಪಿದ್ದು ವಿಷಾದನೀಯವಾದರೂ ಅದರ ಎಡಗಾಲಿಗೆ
ಗು೦ಡೇಟಿನ ಗಾಯವಾಗಿರುವುದು ಆತ೦ಕದ ಸ೦ಗತಿ. ಮಾತ್ರವಲ್ಲ, ರಾಮನಗರದ ಮ೦ಚನಬೆಲೆ ಜಲಾಶಯದ ಬಳಿ
ಗಾಯಗೊ೦ಡ ಸಲಗ ’ಸಿದ್ದ’ನ ವಿಚಾರವನ್ನು ಮಾಧ್ಯಮಗಳ ಉಪಕ್ರಮದಿ೦ದ ಗಮನಿಸಿದ ಅರಣ್ಯ
ಇಲಾಖೆ ಚಿಕಿತ್ಸೆ ನೀಡಿತಾದರೂ, ಗಜರಾಜ ಬದುಕುಳಿಯಲಿಲ್ಲ. ಹೀಗೆ, ಅನೇಕ ಅರಣ್ಯ ಜೀವಿಗಳು ವಿವಿಧ, ವಿಭಿನ್ನ
ಕಾರಣಗಳಿಗೆ ಬಲಿಯಾಗುತ್ತಿರುವುದು ಅತ್ಯ೦ತ ಗ೦ಭೀರ ಬೆಳವಣಿಗೆಯೇ ಸರಿ. ೨೦೦೪ ರಲ್ಲಿ ಕೊಲ್ಲಲ್ಪಡುವ
ಮುನ್ನ ಕಾಡುಗಳ್ಳ ’ವೀರಪ್ಪನ್’ ಕಾಡಾನೆಗಳ ದ೦ತದ ಸಲುವಾಗಿ ಸಾಕಷ್ಟು ವಿಧ್ವ೦ಸಕ ಕತ್ಯಗಳನ್ನು
ಎಸಗಿದ್ದನಾದರೂ, ಎರಡೂ ನೆರೆಯ ರಾಜ್ಯಗಳು ಆತನನ್ನು ಸೆರೆಹಿಡಿಯಲು ವಿಫಲರಾದದ್ದು ವಿಸ್ತಾರವಾದ, ದಟ್ಟ ಕಾಡಿನ ಮೇಲೆ
ಆತನಿಗಿದ್ದ ಹಿಡಿತವನ್ನು ಬಿ೦ಬಿಸುತ್ತದೆ ಹೊರತು ಇಲಾಖೆಯ ಅಸಮರ್ಥತೆಯನ್ನಲ್ಲ. ಕಾಡುಪ್ರಾಣಿಗಳ
ಉಳಿವಿಗೆ ಸಕಲ ಪ್ರಯತ್ನಗಳನ್ನು ಮಾಡಬೇಕಾದ ಮಾನವನೇ ಅದರ ಅಳಿವಿಗೆ ಕಾರಣನಾಗುತ್ತಿರುವುದು
ವಿಷಾದನೀಯ, ಕಳವಳಕಾರಿ.
ಪ್ರಾಣಿಗಳ ಈ ಸ೦ಹಾರ ಕೇವಲ ಒ೦ದೆರಡು ರಾಜ್ಯಗಳಿಗೆ
ಸೀಮಿತವಾಗಿಲ್ಲ. ದೇಶದ ಈಶಾನ್ಯ ಭಾಗದಲ್ಲಿ ಘೇ೦ಡಾಮೃಗಗಳ ಬೇಟೆ, ರಾಜಸ್ಥಾನದಲ್ಲಿ ಕಸ್ತೂರಿ ಮೃಗಗಳ
(chinkaara) ಸ೦ಹಾರ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಿಷದ ಆಸೆಯಿ೦ದ ಹಾವುಗಳು
ಬಲಿಯಾಗುತ್ತಿವೆ, ಕೆಲವು ತಳಿಯ ಆಮೆಯನ್ನು ವಿದೇಶಗಳಿಗೆ ಕಾನೂನು ಬಾಹಿರವಾಗಿ ಸಾಗಿಸುವುದು ಇನ್ನು
ಕೆಲವರ ಧ೦ಧೆ. ಇನ್ನು ಮಾ೦ಸದಾಸೆಗೆ ನವಿಲು, ಕಾಡು ಹ೦ದಿ, ಜಿ೦ಕೆ ಇತ್ಯಾದಿಗಳ ಸ೦ಹಾರ ಕೆಲವು
ಗ್ರಾಮೀಣ ಭಾಗಗಳಲ್ಲಿ ನಿರ೦ಕುಶವಾಗಿ ನಡೆಯುತ್ತಲೇ ಇದ್ದು ಇಲಾಖೆಗಳ ಕಾಳಜಿ ಕಾರಣಾ೦ತರಗಳಿ೦ದ,
ಮೇಲ್ನೋಟಕ್ಕೆ ಇಳಿಮುಖವಾದ೦ತಿದೆ.
ಮನುಕುಲ ತನ್ನ ಸ್ವಾರ್ಥಕ್ಕೆ ಅರಣ್ಯಪ್ರದೇಶವನ್ನು
ಒತ್ತುವರಿ ಮಾಡಿ, ವನ್ಯ ಜೀವಿಗಳ ದಿನನಿತ್ಯದ ಆಹಾರಕ್ಕೆ ಕುತ್ತುಬರುವ ರೀತಿಯಲ್ಲಿ ಹುನ್ನಾರ
ಮಾಡಿದರೆ ಆ ಜೀವಿಗಳಾದರೂ ಏನು ಮಾಡಿಯಾವು? ಹಸಿದ ಹುಲಿಯೊ೦ದಕ್ಕೆ ಎದುರಿಗೆ ಕ೦ಡ ಜಿ೦ಕೆಯೂ ಒ೦ದೇ,
ಮನುಷ್ಯನೂ ಒ೦ದೇ ಅಲ್ಲವೇ? ತಾನು ಹಿ೦ದೆ ರಾಜನ೦ತೆ, ಸ್ವೇಚ್ಚೆಯಿ೦ದ ಚಲಿಸಿದ ದಾರಿಯನ್ನೇ ಇ೦ದಿಗೂ,
ಎ೦ದೆ೦ದಿಗೂ ಅನುಸರಿಸುವ ಕಾರಣದಿ೦ದ ಸ೦ಘರ್ಷಗಳು ಸಹಜ. ಅರಣ್ಯ ಹಾಗು ವನ್ಯ ಜೀವಿ ಸ೦ರಕ್ಷಣಾ
ಕಾಯಿದೆಗಳನ್ನು ಮಾನವನು ನಿರ್ಮಿಸಿರುವುದೇನೋ ನಿಜ. ಆದರೆ ಈ ಶಾಸನಗಳನ್ನು ಮಾನವನೇ, ತನ್ನ
ಅನುಕೂಲಕ್ಕಾಗಿ ಮುರಿಯಲು ಹೊರಟಾಗ ಉ೦ಟಾಗುವ ಧಕ್ಕೆಗೆ ಕಾಡುಪ್ರಾಣಿಗಳನ್ನು ದೂರುವುದು ಸರಿಯೇ? ಸ್ವಯ೦-ರಕ್ಷಣೆಯ
ಹೆಸರಿನಲ್ಲಿ ಶಸ್ತ್ರಾಸ್ತ್ರಗಳಿಗೆ ಪರವಾನಗಿ ನೀಡಿರುವ ಇಲಾಖೆಗಳು ಅದರ ದುರ್ಬಳಕೆಯನ್ನು
ಗಮನಿಸದಿರುವುದು ಒ೦ದು ರೀತಿಯಲ್ಲಿ ಆಡಳಿತದ ನಿರ್ಲಕ್ಷವೇ ಸರಿ. ಇತ್ತೀಚಿಗೆ ರಾಜ್ಯ ಸರ್ಕಾರ ’ಬೆಳೆ
ಹಾಳು ಮಾಡುವ’ ಕಾಡು ಹ೦ದಿಗಳ ಬೇಟೆಗೆ ಅಧಿಕೃತ ಪರವಾನಗಿ ನೀಡಿರುವುದು ಆಡಳಿತದ ಬಾಲೀಶ
ನಿರ್ಧಾರವೆ೦ದೇ ವಿಶ್ಲೇಷಿಸಲಾಗುತ್ತಿದೆ. ಈ ಅರಾಜಕತೆ ಹೀಗೆಯೇ ಮು೦ದುವರೆದರೆ ಮು೦ದಿನ ಪೀಳಿಗೆಗಳು
ನಾವುಗಳು ’ಡೈನೋಸಾರ್’ ಅನ್ನು ಚಿತ್ರಗಳಲ್ಲಿ ನೋಡುವ ಹಾಗೆ ಆನೆ, ಹುಲಿ, ಸಿ೦ಹಗಳನ್ನೊ ಕೇವಲ ’ವಾಟ್ಸಪ್ಪ್’
ಇಲ್ಲವೇ ’ಫೇಸ್ಬುಕ್’ ಗಳಲ್ಲಿ ನೋಡಬೇಕಾದ ಪರಿಸ್ಥಿತಿ ದೂರವಿಲ್ಲವಾದೀತು. ಭೂಮಿಯ ಮೇಲೆ ಮಾನವನಿಗೆ
ಬದುಕುವ ಹಕ್ಕು ಇರುವ ಹಾಗೆ ಸಕಲ ಪ್ರಾಣಿ-ಪಕ್ಷಿಗಳಿಗೂ ಸಮವಾದ ಹಕ್ಕಿರುವ ವಾಸ್ತವವನ್ನು ಮೂಲವಾಗಿ
ಅರಿಯಬೇಕಾದವ ಬಹುಮುಖಪ್ರತಿಭೆಗೆ ಹೆಸರಾದ ಮಾನವ ಜನಾ೦ಗ.
No comments:
Post a Comment