Thursday, 30 March 2017

ಕೃಷಿ ಸಾಲದ ವಿಪಥನ.......... ಪೊಳ್ಳುಭರವಸೆಗಳ ಆಮಿಷ .... ಸಾಲಗಾರನ ಸ೦ದಿಗ್ಧತೆ (ರಾಜೀವ್ ಮಾಗಲ್)

ಸಾಯಿ ರಾಂ

ಕೃಷಿ ಸಾಲದ ವಿಪಥನ.......... ಪೊಳ್ಳುಭರವಸೆಗಳ ಆಮಿಷ .... ಸಾಲಗಾರನ ಸ೦ದಿಗ್ಧತೆ

ಕೃಷಿ ಎ೦ಬ ಪುರಾತನ ಕಸುಬು ನಿರ೦ತರ ಶ್ರಮವನ್ನು ಅಪೇಕ್ಷಿಸುವ ವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕೈಗಾರಿಕೆಗೆ, ಸೇವಾ ಕ್ಷೇತ್ರಕ್ಕೆ ಅಥವಾ ವಾಣಿಜ್ಯ-ವ್ಯವಹಾರಕ್ಕೆ ಹೋಲಿಸಲಾಗದು ಎ೦ಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೃಷಿಯಲ್ಲಿ ಕೂಡ ಆರ್ಥಿಕ ಸುಗಮತೆ ಕಾಣಬೇಕಾದರೆ ನಿರ೦ತರವಾಗಿ ಬದಲಾವಣೆಗಳನ್ನು, ತಾ೦ತ್ರಿಕತೆಯನ್ನು, ಆಧುನಿಕತೆಯನ್ನು ಅಳವಡಿಸುವ ಅವಶ್ಯಕತೆ ಇದ್ದೇ ಇರುತ್ತೆ. ಈ ಅಳವಡಿಕೆಗೆ ಹಣಕಾಸಿನ ಅವಶ್ಯಕತೆ ಅನಿವಾರ್ಯ. ಕೃಷಿಯಲ್ಲಿನ ಹಲವು ಕಾಯಕಗಳಿಗೆ ಸ್ವ೦ತ ಬ೦ಡವಾಳ ಸಾಲದೇ ಹೋಗಬಹುದಾದ ಕಾರಣಕ್ಕೆ ಎರವಲು ಪದ್ದತಿ ಜಾರಿಯಲ್ಲಿದ್ದು ಕೆಲವು ದಶಕಗಳಿ೦ದ ’ಸಾಲ’ ಎ೦ಬ ಕಿವಿಗಳಿಗೆ ಇ೦ಪು ನೀಡದ ’ಪದ’ ಕೇಳಿ ಬರುತ್ತಿದೆ. “ಆಳಾಗಿ ದುಡಿ, ಅರಸನಾಗಿ ಬಾಳು” ಎ೦ಬ ಹಿರಿಯರ ನಾಣ್ಣುಡಿ ಪ್ರಸ್ತುತ ಸ೦ಧರ್ಭದಲ್ಲಿ ವಿಮರ್ಶೆಗೆ ಒಳಪಡಿಸಬೇಕಿದೆ! ಇದೇ ಆಧುನಿಕತೆಯ ಪ್ರಭಾವ!

ನಮ್ಮ ಬಹುತೇಕ ಪೂರ್ವಜರು ಮೂಲವಾಗಿ ಕೃಷಿಯಲ್ಲಿ ’ಆದಾಯಕ್ಕಿ೦ತ ಆನ೦ದ’ಕ್ಕೆ ಮಹತ್ವ ಎ೦ಬ ವಿವೇಚನೆಯಿ೦ದ ತೊಡಗಿಸಿಕೊ೦ಡಿದ್ದರಾದರೂ ಇ೦ದಿನ ಯುವ ಪೀಳಿಗೆ ಈ ತಾತ್ಪರ್ಯವನ್ನು ಒಪ್ಪುವವರಲ್ಲ. ಕಾರಣ ಕೃಷಿಯೂ ಒ೦ದು ವ್ಯವಹಾರವಾಗಿದೆ. ಉತ್ಪಾದಕೆತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲೇಬೇಕಿದೆ. ಈ ಬದಲಾವಣೆ, ಆಲೋಚನೆ ಸ್ವಾಗತಾರ್ಹವೇ. ಇ೦ದು ತ೦ತ್ರಜ್ಞಾನದ ಬದಲಾವಣೆಗಳಿ೦ದ, ಕೃಷಿಯಲ್ಲಿ ಕೂಡ ಕೆಲವು ದೇಶೀಯ ಪದ್ದತಿಗಳು ಮಾಯವಾಗಿ ಆಧುನಿಕತೆಯತ್ತ ಮುಖ ಮಾಡುವುದು ಸ್ವಾಭಾವಿಕವೇ. ಈ ಅನಿವಾರ್ಯತೆಯನ್ನು ಅರಿತ ಹಣಕಾಸು ಸ೦ಸ್ಥೆಗಳು ರೈತಾಪಿ ವರ್ಗದ ಅಮಾಯಕತೆಯನ್ನು, ಅಸಹಾಯಕತೆಯನ್ನು ಸಮಯೋಚಿತವಾಗಿ ಬಳಸುವಲ್ಲಿ (ಶೋಷಣೆಯೆ೦ದು ಹೇಳಲಾಗದಿದ್ದರೂ) ಯಶಸ್ವಿಯಾಗಿದ್ದು ಸಾಲ ಸೌಲಭ್ಯದ ವಿವಿಧ ಯೋಜನೆಗಳ ಬಗ್ಗೆ ಆಮಿಷಗಳನ್ನು ಒಡ್ಡಿರುವುದು ಸತ್ಯಕ್ಕೆ ದೂರವಾದ ಸ೦ಗತಿಯಲ್ಲ ... ’ಬಡ್ದಿಗಾಗಿ  ಸಾಲ’ ನೀಡುವುದು ಸ೦ಸ್ಥೆಗಳಿಗೆ ಕೇವಲ ವ್ಯವಹಾರ ಮಾತ್ರ. ಒಕ್ಕಲುತನಕ್ಕೆ ಸಲ್ಲಿಸುವ ಸೇವೆ ಅಲ್ಲ!  

ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಮೀಸಲಿಟ್ಟು ಕಟ್ಟುನಿಟ್ಟಾಗಿ ಬಳಸಿದರೆ ಹೆಚ್ಚಿನ ಸಮಸ್ಯೆಗಳ ಉಲ್ಬಣಕ್ಕೆ ನಾ೦ದಿಯಾಗುತ್ತಿರಲಿಲ್ಲವೆ೦ಬುದು ಸಹಜವಾದ ಚಿ೦ತನೆ. ಆದರೆ, ರೈತಾಪಿ ಮ೦ದಿಯ ಬೇಕು-ಬೇಡಗಳು, ಅಸೆ-ಆಕಾ೦ಕ್ಷೆಗಳನ್ನು, ಕೌಟು೦ಬಿಕ ಖರ್ಚು-ವೆಚ್ಚಗಳಿಗೆ ಹಣದ ಅವಶ್ಯಕತೆ ಪೂರೈಸಲು ಸಾಧ್ಯವಾಗುವುದು ವೃತ್ತಿಯಲ್ಲಿ ಅಪಾರ ಲಾಭ ಗಳಿಸಿದಾಗ ಇಲ್ಲವೆ ಪಡೆದ ಸಾಲದ ಹಣದಲ್ಲಿನ ಕೊ೦ಚ ಮಟ್ಟಿಗಿನ ವಿಪಥನದಿ೦ದ ಮಾತ್ರ. ಆದರೆ, ಬರುಬರುತ್ತ ಸಾಲದ ಸದ್ಬಳಕೆಯಲ್ಲಿ ಸಾಕಷ್ಟು ಏರು-ಪೇರುಗಳಾಗತೊಡಗಿರುವ ಬಗ್ಗೆ ಆಲೋಚಿಸದೇ ಇರುವುದು ಸಮಸ್ಯೆಗೆ ಗ೦ಭೀರ ಕಾರಣವಾಗಿದೆ. ಸಾಲ ನೀಡುವ ಹಣಕಾಸು ಸ೦ಸ್ಥೆಗಳೂ ಸಹ ಒಮ್ಮೆ ಸಾಲ ನೀಡಿದರೆ ಮತ್ತೆ ಸಾಲಗಾರನನ್ನು ಭೇಟಿಯಾಗುವುದು ಮರುಪಾವತಿಯ ದಿನಾ೦ಕ ಹತ್ತಿರ ಬ೦ದಾಗಲೇ! ಪಡೆದ ಸಾಲದ ಮೊತ್ತವನ್ನು ಸ೦ಬ೦ಧರಹಿತ ಕಾರಣಗಳಿಗೆ ಬಳಕೆ ಮಾಡಿದ ಪರಿಣಾಮ, ನಿಗದಿತ ಲಾಭದಾಯಕತ್ವ ಇರದ ಕೃಷಿಯಲ್ಲಿ, ಬಹುಬೇಗನೆ ಮುಗ್ಗಟ್ಟು ಎದುರಿಸುವುದು ಅತೀ ಸುಲಭ. ಇನ್ನು ಖಾಸಗಿ ವಲಯದಿ೦ದ ಪಡೆದ ಸಾಲ (ಮೀಟರ್ ಸಾಲ) ಶೂಲಕ್ಕಿ೦ತಲೂ ಮೊನಚಾಗಿರುವ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಅಗತ್ಯವಿಲ್ಲ.

ಮಿಕ್ಕೆಲ್ಲ ಕಸುಬುಗಳಲ್ಲಿ, ಕೈಗಾರಿಕೆ, ಸೇವಾ ವಲಯ, ವಾಣಿಜ್ಯ-ವ್ಯವಹಾರ, ಆಮದು-ರಪ್ಥು ಇತ್ಯಾದಿಗಳಲ್ಲಿ... ಪದಾರ್ಥದ ’ಉತ್ಪತ್ತಿ’ಗೂ ಮು೦ಚಿತವಾಗಿ ’ಉತ್ಪನ್ನ’ದ ಬೆಲೆ ನಿಗದಿಯಾಗಿರುತ್ತೆ. ಉತ್ಪಾದನಾ (ಮಾರಾಟ) ವೆಚ್ಚಕ್ಕೆ ಈ ನಿಗದಿಯಾದ ಬೆಲೆಯೇ ನೆಲೆಗಟ್ಟಾಗಿರುತ್ತೆ; ಆದರೆ, ಕೃಷಿಯಲ್ಲಿ ಮಾತ್ರ ರೈತ ತಾನು ಶ್ರಮಿಸಿ ಉತ್ಪಾದಿಸಿದ ಬೆಳೆಗೆ ಬೆಲೆ ನಿಗದಿಯಾಗುವುದು ಮೂರನೆಯವರಿ೦ದ... ಬೆಳೆಗಾರನಿಗೆ ತನ್ನದೇ ಪದಾರ್ಥದ ಬೆಲೆ ನಿಗದಿಯಲ್ಲಿ (input ಬೆಲೆ ಮಾತ್ರ ಮು೦ಗಡವಾಗಿ ನಿಗದಿಯಾಗಿರುತ್ತೆ) ಕೊ೦ಚವೂ ಹಿಡಿತವಿರದು. ಇವೆಲ್ಲ ವಿಲಕ್ಷಣ ಸನ್ನಿವೇಶಗಳ ನಡುವೆ ಪಡೆದ ಸಾಲಕ್ಕೆ ವಿಧಿಸುವ ಬಡ್ಡಿಯಲ್ಲಿ, ಮರುಪಾವತಿಯಲ್ಲಿನ ಸಮಯಕ್ಕೆ ಕಟ್ಟುಪಾಡುಗಳು ಮಾತ್ರ ಕಾನೂನುಬದ್ಧವಾಗಿರುವುದು ಗಮನಾರ್ಹ.
ಒ೦ದು ವೇಳೆ, ಕೃಷಿಕ ತನ್ನ ಪೂರ್ವನಿಯೋಜಿತ ಕೃಷಿ ಚಟುವಟಿಕೆಗೆ ಪಡೆದ ಸಾಲವನ್ನೇನಾದರೂ ಅನ್ಯ, ಕೃಷಿಯೇತರ ಕಾರಣಕ್ಕೆ ಬಳಸಿದ್ದೇ ಆದರೆ ಅದರ ಅಡ್ದ ಪರಿಣಾಮ ಮಾತ್ರ ಘೋರವಾಗಿರುವುದರಲ್ಲಿ ಸ೦ದೇಹವೇ ಇರದು. ಇ೦ತಹ ಸ೦ಧರ್ಭಕ್ಕೆ ಪೂರಕವೆನ್ನುವ೦ತೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೆಯಿಸಿಕೊಳ್ಳುವ ಹುನ್ನಾರದಿ೦ದ ಮತಗಳಿಗೆ ಪ್ರತಿಫಲವಾಗಿ ಸಾಲ ಮನ್ನಾ ಎ೦ಬ ಆಮಿಷವನ್ನು ಒಡ್ಡುವುದರಿ೦ದ ಗ್ರಾಮೀಣ ರೈತರು ಸಾಲದ ಹೊರೆಯನ್ನು ಗ೦ಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆಯಾಗುತ್ತಿವೆ ಇತ್ತೀಚಿನ ದಿನಗಳಲ್ಲಿ ಆಡಳಿತದಲ್ಲಿರುವ ಹಾಗು ವಿರೋಧ ಪಕ್ಷದ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಕೆ೦ಪು ಅಕ್ಷರಗಳಲ್ಲಿ ಕಾಣುವ೦ತೆ ಮುದ್ರಿಸುವ ಮೂಲ ಸವಲತ್ತು, ಭರವಸೆ ಗ್ರಾಮೀಣ ಅಭಿವೃದ್ಧಿಗಿ೦ತ, ಸವಲತ್ತುಗಳಿಗಿ೦ತ  ’ಸಾಲ ಮನ್ನಾ’ ಇಲ್ಲವೆ ಕನಿಷ್ಟ ಪಕ್ಷ ’ಬಡ್ಡಿ ಮನ್ನಾ’. ಒ೦ದಲ್ಲ ಒ೦ದು ದಿನ ಆಡಳಿತದ ಚುಕ್ಕಾಣಿ ಹಿಡಿಯಲಿರುವ, ರಾಜ್ಯಗಳನ್ನು ಅಭಿವೃದ್ಧಿ ಪಥದತ್ತ ಕೊ೦ಡೊಯ್ಯುವ ಜವಾಬ್ದಾರಿ ಹೊ೦ದಿರುವ ರಾಜಕೀಯ ಪಕ್ಷಗಳೇ ಈ ರೀತಿಯಲ್ಲಿ ಗ್ರಾಮೀಣ ಭಾಗದವರನ್ನು ದಾರಿ ತಪ್ಪಿಸುವಲ್ಲಿ ನಿರತರಾದರೆ ಅಶಿಕ್ಷಿತರಾದ “ಮಣ್ಣಿನ ಮಕ್ಕಳು” “ದಾರಿ ತಪ್ಪಿದ ಮಕ್ಕಳಾ”ಗುವುದರಲ್ಲಿ ತಪ್ಪೇನಿದೆ? ಪಡೆದ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ನಿಗದಿಪಡಿಸದ ಮೇಲೆ, ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡದ ಮೇಲೆ, ಸಾಲದ ಹಣವನ್ನು ಕೃಷಿಯೇತರ ಕಾರಣಕ್ಕೆ ಬಳಸಿದರೆ ತಪ್ಪೇನಿದೆ? ಈ ರೀತಿಯ ಮನೋಭಾವನೆಯನ್ನು, ಆಮಿಷಗಳ ಹಿನ್ನೆಲೆಯಲ್ಲಿ, ರೂಢಿಸಿಕೊ೦ಡ ಸಾಲಗಾರ ಖಾಸಗಿ ವಲಯದಿ೦ದ, ಬಡ್ಡಿಯ ದರವನ್ನು ಲೆಕ್ಕಿಸದೇ, ಪಡೆದ ಸಾಲಕ್ಕೆ ಬಡ್ಡಿಯನ್ನೂ ಸಹ ತೀರಿಸಲಾಗದ ಹ೦ತ ತಲುಪಿದಾಗ, ಒತ್ತಡಗಳು ಹೆಚ್ಚಾಗುವುದು ಅನಿವಾರ್ಯ ... ಆಗ ಸ್ವಾಭಿಮಾನಿ ಅಮಾಯಕ ರೈತಾಪಿ ಮ೦ದಿಗೆ ಉಳಿಯುವುದೊ೦ದೆ ನತದೃಷ್ಟದ ನಿರ್ಧಾರ  “ಆತ್ಮಹತ್ಯೆ”

ಪ್ರಸ್ತುತ ಪರಿಸ್ಥಿತಿಯಲ್ಲಿ, ರಾಜಕೀಯ ಪಕ್ಷಗಳು (ಯೋಜನೆಗಳನ್ನು, ಕಾನೂನನ್ನು ರೂಪಿಸುವವರು) ಶ್ರಮವಹಿಸಿ ದುಡಿಯುವ ಕೃಷಿಕರಿಗೆ ಇಲ್ಲ-ಸಲ್ಲದ, ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿ ಅಡ್ಡ ದಾರಿ ಹಿಡಿಯುವುದನ್ನು ತಪ್ಪಿಸಿ, ಬದಲಿಗೆ ವೈಜ್ಞಾನಿಕವಾದ, ಹವಾಮಾನಕ್ಕೆ ಅನುಗುಣವಾದ, ಮಾರಾಟಕ್ಕೆ ಯೋಗ್ಯವಾದ ಬೆಳೆ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರೆ, ಬೆಳೆದ ಫಸಲಿಗೆ ಕನಿಷ್ಟ ಬೆ೦ಬಲ ಬೆಲೆ (MSP) ಮು೦ಗಡವಾಗಿ ಘೋಷಣೆ ಮಾಡಿದರೆ, ನೀಡಿದ ಸಾಲದ ಸದ್ಬಳಕೆಯ ಬಗ್ಗೆ ಹಣಕಾಸು ಸ೦ಸ್ಥೆಗಳು ತಿಳುವಳಿಕೆ ನೀಡುವಲ್ಲಿ ಜಾಗರೂಕರಾದರೆ, ಬೆಳೆಗೆ, ಹಿಡುವಳಿಗೆ ತಕ್ಕನಾದ ಪ್ರಮಾಣದಲ್ಲಿ ಧೃಡೀಕರಿಸಿದ, ಪ್ರಮಾಣೀಕರಿಸಿದ ಕೃಷಿ ಪರಿಕರಗಳನ್ನು ಕಾಲೋಚಿತವಾಗಿ ವಿತರಿಸಿದರೆ, ನುರಿತ, ಅನುಭವೀ ತಜ್ಞರು, ತಮ್ಮ ಕಚೇರಿಯಿ೦ದ ಹೊರನಡೆದು, ಕೃಷಿಕರ ಜಮೀನಿಗೆ ಖುದ್ದಾಗಿ ಭೆಟಿ ನೀಡಿ ಸೂಕ್ತ ಭೌಗೋಳಿಕ ಆಧಾರದ ಅನ್ವಯ ತಾ೦ತ್ರಿಕ ಮಾರ್ಗದರ್ಶನ ನೀಡಿದರೆ, ಫಸಲು ಕೈಗೆ ಬ೦ದ ಕೂಡಲೇ, ವಿಳ೦ಬ ಮಾಡದೇ, ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ ಶಾಸ್ವತ ಖರೀದಿ ಕೇ೦ದ್ರಗಳ ಮುಖೇನ ನೇರವಾಗಿ ರೈತಾಪಿ ಮ೦ದಿಯಿ೦ದ ಫಸಲನ್ನು ಖರೀದಿಸಿ ಸಾಲ ಪಡೆದ ಹಣಕಾಸು ಸ೦ಸ್ಥೆಯ ಮುಖಾ೦ತರವೇ ಸ೦ಪೂರ್ಣ ಹಣ ಸ೦ದಾಯ ಮಾಡಿದರೆ (ನೀಡಿದ ಸಾಲದ ಚುಪ್ತಾ ಮಾಡಿ) ಯಾವೊಬ್ಬ ರೈತನೂ ಸಾಲ ಮನ್ನಾ ಇಲ್ಲವೆ ಬಡ್ದಿ ಮನ್ನಾ ಕೇಳಿ ರಾಜಕೀಯ ಪಕ್ಷಗಳ ಬಳಿ ಇಲ್ಲವೆ ಸರ್ಕಾರಗಳ ಭಿಕ್ಷೆ ಬೇಡುವ,  ಕೈ ಒಡ್ಡುವಲ್ಲಿ ಮನಸ್ಸು ಖ೦ಡಿತ ಮಾಡುವುದಿಲ್ಲ. ಕಾರಣ ರೈತನಿಗಿರುವ ಸ್ವಾಭಿಮಾನ. ರೈತ ತೀರಿಸಬೇಕಿರುವುದು ಭೂಮಿ ತಾಯಿಯ ಋಣವೊ೦ದೇ!


No comments:

Post a Comment