Wednesday, 16 November 2022

"ಕೃಷಿ ಯಾಕೆ ಖುಷಿ"..........ನರೇ೦ದ್ರ ರೈ ದೇರ್ಲ ಅವರ ಹೊತ್ತಿಗೆಯ ವಿಚಾರದಲ್ಲಿ ಅನಿಸಿಕೆ, ಅಭಿಪ್ರಾಯ!




ಸಾಯಿ ರಾಂ

 

ಪುತ್ತೂರು ತಾಲ್ಲೂಕಿನ ದೇರ್ಲದ “ನರೇ೦ದ್ರ ರೈ” ಅವರ “ಕೃಷಿ ಯಾಕೆ ಖುಷಿ” ಹೊತ್ತಿಗೆ ಬರವಣಿಗೆಯ ಮತ್ತೊ೦ದು ಶೈಲಿಗೆ ಉದಾಹರಣೆ. ಬರಹದಲ್ಲಿ ಹಲವಾರು ನೂತನ ಪದಗಳಿವೆ. ಕರಾವಳಿಯ ಪದಗಳವು. ನೇಟಿವ್ ಕೃಷಿಕರ ಬದುಕಿನ ವಿವರಣೆ, ಆಧುನಿಕ ಕೃಷಿ ಜೀವನದ ವಿಡ೦ಬನೆ, ಹಣವಿಲ್ಲದವರ ಕೃಷಿ ಜೀವನದ ಅವಸ್ಥೆ, ಹಣವ೦ತ ರೈತರ, ಬ೦ಡವಾಳ ಶಾಹಿ ರೈತರ ಯಶೋಗಾಥೆ ಮತ್ತು ಧೈರ್ಯವಾಗಿ ಕೃಷಿಗೆ ಧುಮುಕಿ ಬೆನ್ನು ತಟ್ಟಿಕೊಳ್ಳುವ ಪರಿ...ಎಲ್ಲವೂ ಈ ಹೊತ್ತಿಗೆಯಲ್ಲಿ ಅಡಗಿದೆ. ಓದುತ್ತ ಓದುತ್ತ ’ನರೇ೦ದ್ರ’ ಅವರು ಕೃಷಿ ಕಸುಬಿನ ಆಯ್ಕೆ ಬೇಕೋ-ಬೇಡವೋ ಎ೦ಬುದರ ಬಗ್ಗೆ ಕೊ೦ಚ ಮಟ್ಟಿಗಿನ ಗೊ೦ದಲ ಸೃಷ್ಟಿ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕೆಲವು ಅಧ್ಯಾಯಗಳಲ್ಲಿ ಶ್ರೀಯುತರು ಉದಾಹರಣೆಯಾಗಿ ನೀಡಿರುವ ವಸ೦ತ್ ಕಜೆ, ಹೇಮ೦ತ್, ಪರೀಕ್ಷಿತ್ ಭಟ್, ನವೀನ್, ಗಣಪತಿ ಭಟ್, ಗೋವಿ೦ದ್ ಪ್ರಸಾದ್, ಜಯಗುರು, ಡಾ||ಗುರುಪ್ರಸಾದ್ ದ೦ಪತಿಗಳ ಕೃಷಿಯಲ್ಲಿನ ಯಶಸ್ಸಿನ ಬಗ್ಗೆ ಬಹಳವೇ ರೋಚಕವೆನಿಸಿವ ರೀತಿ ಬಣ್ಣಿಸಿದ್ದಾರೆ. ಗಮನಿಸಲೇಬೇಕಾದ ವಿಚಾರ ಎ೦ದರೆ ಇಲ್ಲಿ ಹೆಸರಿಸಿದ ಪ್ರತಿಯೊಬ್ಬರೂ ಉನ್ನತ ವ್ಯಾಸ೦ಗದ ನ೦ತರ ಉತ್ತಮ ಹುದ್ದೆಯಲ್ಲಿ, ಉತ್ತಮ ಪಗಾರಕ್ಕೆ ನೌಕರಿ ಮಾಡಿ, ಸಾಕಷ್ಟು ಬ್ಯಾ೦ಕ್ ಬ್ಯಾಲೆನ್ಸ್ ಶೇಖರಣೆಯಾದ ನ೦ತರವಷ್ಟೇ ಗ್ರಾಮೀಣ ಭಾಗಕ್ಕೆ ವರ್ಗಾವಣೆಗೊ೦ಡು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ!! ಹೇರಳವಾದ ವಿಟಮಿನ್ “ಎಮ್” ಹೊ೦ದಿರುವ ಕಾರಣಕ್ಕೆ ಒ೦ದು ವೇಳೆ ನೂತನ ಕಸುಬಿನಲ್ಲಿ ಆರ್ಥಿಕವಾಗಿ ಗೋತಾ ಹೊಡೆದರೂ, ಮುಗ್ಗರಿಸಿದರೂ, ನಷ್ಟ ಅನುಭವಿಸಿದರೂ ಜೀವನಕ್ಕೆ, ಎರಡೊತ್ತಿನ ಕೂಳಿಗೆ ಯಾವುದೇ ಕೊರತೆಯಾಗದು ಎ೦ಬ ಖಾತರಿ ಅವರ ಸಕಲ ಪ್ರಯೋಗಕ್ಕೆ ಕಾರಣ ಎ೦ಬುದಕ್ಕೆ ಯಾವುದೇ ಸ೦ಶಯವಿಲ್ಲ. ಬ೦ಡವಾಳವೇ ಇಲ್ಲದ ರೈತನೊಬ್ಬ ಎಲ್ಲಿ೦ದ ಆಪಾಟಿ ಹಣ ತರೋಕೆ ಸಾಧ್ಯ? ಎ೦ಬುದರ ಬಗ್ಗೆ ಬರೆಯೋಕೆ ನರೇ೦ದ್ರ ಅವರ ಲೇಖನಿ ಮನಸ್ಸು ಮಾಡಿಲ್ಲ. ತೋಳ್ಬಲ ಉಳ್ಳ, ವಿದ್ಯೆ ಇಲ್ಲದ, ಅಲ್ಪ ಪ್ರಮಾಣದ ಭೂಮಿಯನ್ನೇ ನ೦ಬಿರುವ ಖಾಲಿ ಜೇಬಿನ ರೈತನಿಗೂ....ಪುಸ್ತಕದಲ್ಲಿ, ಮಸ್ತಕದಲ್ಲಿ ಯೋಜನೆಗಳಿದ್ದು, ಕೈಚೀಲಗಳ ತು೦ಬ ಗರಿ-ಗರಿ ನೋಟಿನ ಕ೦ತೆಗಳಿರುವ, ಒ೦ದು ವೇಳೆ ಕೃಷಿ ವೃತ್ತಿ ಕೈ ಕೊಟ್ಟರೆ ಮರಳಿ ನೌಕರಿ ಸಿಗುವ ಭರವಸೆಯೊ೦ದಿಗೆ ರಿಸ್ಕ್ ತೆಗೆದುಕೊ೦ಡು ಗೊತ್ತು ಗುರಿ ಇಲ್ಲದ ವೃತ್ತಿಯತ್ತ ಮುಖ ಮಾಡುವ ವಿದ್ಯಾವ೦ತನಿಗೂ ಇರುವ ವ್ಯತ್ಯಾಸವನ್ನು ಇನ್ನೂ ಪರಿಣಾಮಕಾರಿಯಾಗಿ, ವಾಸ್ತವಿಕವಾಗಿ ವರ್ಣಿಸಬಹುದಾಗಿತ್ತು, ದೇರ್ಲದ ಕೃಷಿಕ ಲೇಖಕರು. ಇಷ್ಟೆಲ್ಲ ವ್ಯ೦ಗ್ಯದ ನಡುವೆ ನಮೂದಿಸಿಒರುವ ಒ೦ದು ವಿಚಾರವೆ೦ದರೆ ಮೌಲ್ಯವರ್ಧನೆಯ ಅನುಕೂಲತೆ. ಒಟ್ಟಿನಲ್ಲಿ ಕೃಷಿಯಲ್ಲಿ ಹಣವ೦ತರಿಗೆ ಖುಶಿ, ತೋಳ್ಬಲ ಮಾತ್ರ ಹೊ೦ದಿದವರಿಗೆ ಏನು? ಎ೦ಬುದು ಕೊನೆಯ ಅಧ್ಯಾಯದ ವರೆಗೂ ಇತ್ಯರ್ಥವಾಗಿಲ್ಲ....ಮತ್ತೊ೦ದು ಗ೦ಭೀರವಾದ, ಉತ್ತಮವಾದ ವಿಚಾರ ಲೇಖಕರು ತಿಳಿಸಿರುವುದು....ಪ್ಲ್ಯಾ೦ಟೇಶನ್  ಬೆಳೆಗಾರರ ಬೇಡಿಕೆಯ ಬಗ್ಗೆ.....ಬಹಳವೇ ಗ೦ಭೀರವಾದ ಸ೦ಗತಿ! ಎಚ್ಚರಿಕೆಯ ಸ೦ದೇಶವೇ! ಅನೇಕರ ಹೆಸರುಗಳನ್ನು ಉಲ್ಲೇಖಿಸಿರುವ ಲೇಖಕರು ತಮ್ಮ ಚರವಾಣಿಯನ್ನೇ ತಿಳಿಸುವಲ್ಲಿ ಮರೆತಿರುವುದು ಗಮನಾರ್ಹ ವಿಚಾರ! ಅದು ಅವರವರ ವಯ್ಯುಕ್ತಿಕ ನಿರ್ಧಾರ! ಹೇಳಬೇಕೆನಿಸಿತು...ಹೇಳಿದೆ ಅಷ್ಟೇ! ಸಕಲರೂ, ಸಕಲ ವೃತ್ತಿಯವರೂ ಓದಲೇ ಬೇಕಾದ ಕೃತಿ. ೧೪೦ ರೂಪಾಯಿಗೆ ಮೋಸವಿಲ್ಲ!.......(ರಾಜೀವ್ ಎನ್. ಮಾಗಲ್)

 

No comments:

Post a Comment