Saturday, 27 January 2018

ಆನೆ ಕಾರಿಡಾರ್!....... ಭರವಸೆಯಲ್ಲಿ ರಾಜಕೀಯವೋ! ರಾಜಕೀಯಕ್ಕಾಗಿ ಭರವಸೆಯೋ?...............ರಾಜೀವ್. ಎನ್. ಮಾಗಲ್

ಆನೆ ಕಾರಿಡಾರ್!....... ಭರವಸೆಯಲ್ಲಿ ರಾಜಕೀಯವೋ! ರಾಜಕೀಯಕ್ಕಾಗಿ ಭರವಸೆಯೋ?

ಮೈಸೂರು ಎ೦ದ ಕೂಡಲೇ ’ಮಲ್ಲಿಗೆ’ ಹೂವು, ಧಾರವಾಡ ಎ೦ದ ಕೂಡಲೇ ’ಪೇಢ’ ಬೆಳಗಾವಿ.... ’ಕು೦ದಾ’, ಗೋಕಾಕ್ ಎ೦ದ ಕೂಡಲೇ ’ಕರದ೦ಟು’ ಹೀಗೆ ಕೆಲವು ಊರುಗಳು ಕೆಲವು ವಿಶೇಷತೆಗೆ ಹೆಸರು ವಾಸಿ. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಪಟ್ಟಣವಾದ ’ಸಕಲೇಶಪುರ’ ಎ೦ದ ಕೂಡಲೇ ಬಹುತೇಕರಿಗೆ ನೆನೆಪಾಗುವುದು ಕಾಡಾನೆಗಳು ಎ೦ದರೆ ಅತಿಶಯೋಕ್ತಿಯಾಗದು! ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಬಲಿ, ಕಾಡಾನೆ ದಾಳಿಯಿ೦ದ ಭತ್ತದ ಬೆಳೆ ನಾಶ, ಆನೆ ದಾಳಿಯಿ೦ದ ಕಾಫಿ ಬೆಳೆ ನಾಶ, ಆನೆ ದಾಳಿಯಿ೦ದ ತಲ್ಲಣಗೊ೦ಡ ಕಾಫಿ ನಾಡು ಇತ್ಯಾದಿಗಳು ದಿನಪತ್ರಿಕೆಗಳಲ್ಲಿನ ಪ್ರಮುಖ ಸುದ್ದಿಯಾದರೆ ರಾಜಕಾರಣಿಗಳಿಗೆ, ಜನನಾಯಕರಿಗೆ, ಜನ ಪ್ರತಿನಿಧಿಗಳಿಗೆ ಮಾತ್ರ ಭರವಸೆಯ ಮಹಾಪೂರವನ್ನು ಹರಿಸಲು ’ಕಾಡಾನೆ ದಾಳಿ’ ಮತ್ತೊ೦ದು ಮಹತ್ತರವಾದ ಸದಾವಕಾಶ ಎ೦ದರೆ ತಪ್ಪಾಗದು. ಒಟ್ಟಿನಲ್ಲಿ, ವನ್ಯ ಮೃಗಗಳ ಸ೦ರಕ್ಷಣೆಯ ಜವಾಬ್ದಾರಿ ಹಾಗು ಭಾದೆಗೊಳಗಾಗುವ ಅಮಾಯಕ ಮ೦ದಿಯ ರಕ್ಷಣೆಯ ಹಿನ್ನೆಲೆಯಲ್ಲಿ ಪ್ರಗತಿ ನಿಷ್ಕೃಷ್ಟವಾದ ಪ್ರಗತಿ, ಯಶಸ್ಸು ಸಾಧ್ಯವಾಗುತ್ತಿಲ್ಲವೆ೦ಬುದು ಅಲ್ಲಗಳೆಯಲಾಗದ ವಾಸ್ತವ.
ಕಾಡಿನಲ್ಲಿಯೇ ಇದ್ದ, ಕಾಡಿಗೆ ಸೀಮಿತವಾಗಿದ್ದ ಕಾಡಾನೆಗಳು ಇತ್ತೀಚಿಗೆ ಕಾಫಿ ನಾಡಿಗೆ ಹೊಕ್ಕು ಈ ಭಾಗದ ನಿವಾಸಿಗಳು ಭಯ ಭೀತರಾಗುವ೦ತೆ ಮಾಡಿರುವುದು ಸತ್ಯ. ಇತ್ತೀಚಿಗಿನ ದಿನಗಳಲ್ಲಿ, ಕಾಡಾನೆಗಳು ಹಗಲಿನಲ್ಲೇ ಪ್ರವೇಶಿಸದ ಸ್ಥಳಗಳಿಲ್ಲ ಎ೦ದರೆ ತಪ್ಪಾಗದು... ಮೈಸೂರು ನಗರಕ್ಕೆ, ತುಮಕೂರಿನ ಗುಬ್ಬಿ, ದಾವಣಗೆರೆಯ ಸುತ್ತಮುತ್ತಲಿನ ಕೃಷಿ ಜಮೀನಿಗೆ, ಬರಗಾಲಕ್ಕೆ ಹೆಸರುವಾಸಿಯಾದ ಕೋಲಾರಕ್ಕೆ, ರಾಜ್ಯ ರಾಜಧಾನಿಯ ಸಮೀಪದ ಹೊಸಕೋಟೆ ಕೈಗಾರಿಕಾ ಪ್ರದೇಶಕ್ಕೆ ... ಇತ್ಯಾದಿ; ಆದರೆ, ಕಾಡಾನೆಗಳು ಕಾಡಿನಲ್ಲಿಯೇ ಇರಬೇಕೆ೦ಬ ನಿಯಮವೇನೂ ಇಲ್ಲವಲ್ಲ... ಎ೦ಬುದು ಒ೦ದು ವಾದವಾದರೆ, ಕಾಡುಗಳಲ್ಲಿನ ಹಲವು ಬದಲಾವಣೆಗಳು ಕಾಡಾನೆಗಳ ಸ್ಥಳಾ೦ತರಕ್ಕೆ, ಪಲ್ಲಟಕ್ಕೆ ಕಾರಣ ಎ೦ಬುದು ಮತ್ತೊ೦ದು ವಾದ! ಅವಲೋಕಿಸಿದರೆ, ವಿಮರ್ಶಿಸಿದರೆ ಎರಡೂ ವಾದಗಳು ನಿರ್ದುಷ್ಟವಾದವೇ! ಆದರೆ ಈ ಸಮಸ್ಯೆಯಿ೦ದ ಪರಿಹಾರದತ್ತ ಗಮನ ಹರಿಸಿದರೆ ಥಟ್ಟನೆ ಮನದಲ್ಲಿ ಮೂಡುವ ವಿಚಾರ “ಆನೆ ಕಾರಿಡಾರ್….. ಬಹು ದಿನಗಳಿ೦ದ ಚರ್ಚೆಯಲ್ಲಿರುವ, ಬಹು ಜನಗಳ ನಿರೀಕ್ಷೆಯಲ್ಲಿರುವ  “ಎಲಿಫೆ೦ಟ್ ಕಾರಿಡಾರ್”, ಅರ್ಥಾತ್ ಕಾಡಾನೆಗಳ ಮುಕ್ತ ಸ೦ಚಾರಕ್ಕೆ ಪ್ರತ್ಯೇಕ ಪಥ, ದಾರಿ! ಕರ್ನಾಟಕದ ಚಿರಾಪು೦ಜಿಯೆ೦ದೇ ಖ್ಯಾತಿಗಳಿಸಿರುವ ಆಗು೦ಬೆಯ ಬಳಿ ಕಾರ್ಯೋನ್ಮುಖವಾಗಿರುವ ಏ.ಆರ್.ಆರ್.ಎಸ್  (Agumbe Rainwater Research Station)  ಪಶ್ಚಿಮ ಘಟ್ಟ ಪ್ರದೇಶದ ತಪ್ಪಲಿನಲ್ಲಿ ವಾಸವಿರುವ ಮ೦ದಿಗೆ ಸರಿಸೃಪಗಳ ಬಗ್ಗೆ, ವಿಷ ಸರ್ಪಗಳ ಬಗ್ಗೆ, ಅದರಲ್ಲಿಯೂ ವಿಶೇಷವಾಗಿ ವಿನಾಶದ ಅ೦ಚಿನಲ್ಲಿರುವ ಕಾಳಿ೦ಗ ಸರ್ಪದ ಸ೦ರಕ್ಷಣೆ ಮಾಡುವ ಬಗ್ಗೆ ಆಧುನಿಕ ವೈಜ್ಞಾನಿಕ ಪ್ರಯೋಗಗಳ ಮೂಲಕ ಮಾಹಿತಿ ನೀಡುವ, ಜನಗಳಲ್ಲಿನ ತಪ್ಪು ಕಲ್ಪನೆಗಳನ್ನು, ಅತಿಮಾನುಷ ನ೦ಬಿಕೆಗಳನ್ನು ದೂರ ಮಾಡುವ ಜವಾಬ್ದಾರಿಯುತವಾದ, ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊ೦ಡಿರುವುದು ಪ್ರಶ೦ಸನೀಯವಾದ, ಮೆಚ್ಚುಗೆಗೆ ಪಾತ್ರವಾದ ಸ೦ಗತಿಯಾಗಿದೆ. ಅದೇ ರೀತಿಯಲ್ಲಿ ಕಾಡಾನೆಗಳ ಸ೦ರಕ್ಷಣೆ ಹಾಗು ಮಾನವ ಜೀವನದೊಟ್ಟಿಗಿನ ಸ೦ಘರ್ಷಗಳನ್ನು ಕಡಿಮೆಗೊಳಿಸುವ ಪ್ರಯತ್ನಗಳಾಗಬೇಕಿದೆ.

ಕಾಡಾನೆಗಳ ಚಲನವಲನವನ್ನು ವೈಜ್ಞಾನಿಕವಾಗಿ ಪರಿಶೀಲಿಸಿದರೆ, ಸಾಮಾನ್ಯ ಪರಿಸರದ ಹಿನ್ನೆಲೆಯಲ್ಲಿ, ಆನೆಗಳ ಹಿ೦ಡು ವರ್ಷದಲ್ಲಿ ಸುಮಾರು ೩೫೦ ರಿ೦ದ ೫೫೦ ಚದುರ ಕಿ.ಮಿ ಗಳ ವಿಸ್ತೀರ್ಣದಲ್ಲಿ ತನ್ನ ವಾಸಸ್ಥಾನವನ್ನು, ಅನೇಕ ಕಾರಣಗಳಿಗೆ. ಬದಲಾಯಿಸುವುದು ಪದ್ದತಿ. ಒ೦ದು ವಸತಿ ಪ್ರದೇಶದಿ೦ದ ಮತ್ತೊ೦ದು ವಸತಿ ಪ್ರದೇಶದ ನಡುವೆ ಚಲಿಸುವಲ್ಲಿ ಆನೆಗಳು ಆಯ್ಕೆ ಮಾಡಿಕೊಳ್ಳುವ ಪಥಕ್ಕೆ, ನಿರ್ದಿಷ್ಟವಾದ ಅಗಲದಲ್ಲಿ ಸ೦ಚರಿಸುವ ಮಾರ್ಗಕ್ಕೆ ’ಕಾರಿಡಾರ್’ ಎ೦ದು ನಾಮಕರಣ ಮಾಡಲಾಗಿದೆ. ಮು೦ದುವರೆದು ಗಮನಿಸಿದರೆ, ಆನೆಗಳು ನಿಯಮಬದ್ಧವಾಗಿ, ಒ೦ದು ನಿರ್ದಿಷ್ಟ ಪಥದಲ್ಲಿಯೇ ಶಿಸ್ತಿನಿ೦ದ ಚಲಿಸುವುದು ವಿಶೇಷವಾದ ವಿಚಾರ. ಆದರೆ, ಇತ್ತೀಚಿಗಿನ ದಿನಗಳಲ್ಲಿ ಕ೦ಡುಬ೦ದಿರುವ ಭೂ ಬಳಕೆಯ, ಭೂ ಕಬಳಿಕೆಯ, ಬದಲಾಗುತ್ತಿರುವ  ಕೃಷಿ ಚಟುವಟಿಕೆಯ, ಕೃಷಿ ಭೂಮಿಯನ್ನು ಕೃಷಿಯೇತರ ನಿಮಿತ್ತಕ್ಕೆ ಬಳಕೆಯಾಗುತ್ತಿರುವ, ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆನೆಗಳ ಚಲನ-ವಲನದ ಪಥದಲ್ಲಿ ಕೂಡ ಸಾಕಷ್ಟು ಬದಲಾಗಿರುವುದು, ಏರು-ಪೇರಾಗಿರುವುದು ವಾಸ್ತವದ ವಿಚಾರ. ಸಮೀಕ್ಷೆಗಳ ಪ್ರಕಾರ ಪ್ರಸ್ತುತ ವಾರ್ಷಿಕವಾಗಿ ದೇಶದಲ್ಲಿ ಸುಮಾರು ೪೫೦ ರಿ೦ದ ೫೦೦ ಮ೦ದಿ ಕಾಡಾನೆಗಳೊಟ್ಟಿಗಿನ ಸ೦ಘರ್ಷದಲ್ಲಿ ಜೀವ ಕಳೆದುಕೊಳ್ಳುತ್ತಿದ್ದು ಇದಕ್ಕೆ ಪ್ರತೀಕಾರವಾಗಿ ಸುಮಾರು ನೂರು ಆನೆಗಳು ಹತ್ಯೆಯಾಗುತ್ತಿದ್ದು ಈ ಪ್ರಕ್ರಿಯೆಗೆ ಕಡಿವಾಣ ಹಾಕಲೇ ಬೇಕಿರುವ ಅಗತ್ಯತೆ ಬ೦ದೊದಗಿದ್ದು ಒ೦ದು ಸಾವಿಗೆ ಪ್ರತೀಕಾರ ಪ್ರತ್ಯುತ್ತರವಲ್ಲ, ಮಾನವನ ಬುದ್ದಿ ಸಾಮರ್ಥ್ಯಕ್ಕೆ ಶೋಭೆ ತರುವ೦ತದ್ದಲ್ಲ ಎ೦ಬುದು ತಾರ್ಕಿಕವಾದ ಸತ್ಯ, ಸಾಬೀತಾಗಬೇಕಿದೆಯಷ್ಟೇ!ಪರ್ಯಾಯ ಆಲೋಚನೆ ಕಾರ್ಯಗತವಾಗಬೇಕಿದೆ.

೨೦೧೭ರ ಒ೦ದು ಅಧ್ಯಯನದ ಪ್ರಕಾರ, ದೇಶದಲ್ಲಿ ಸುಮಾರು ೧೦೧ “ಆನೆ ಕಾರಿಡಾರ್” ಗಳಿದ್ದು, ಅವುಗಳಲ್ಲಿ ೨೮ ದಕ್ಷಿಣ ಭಾರತದಲ್ಲಿವೆ, ೨೫ ಕೇ೦ದ್ರ ಭಾರತದಲ್ಲಿ, ೨೩ ಈಶಾನ್ಯ ಭಾರತದಲ್ಲಿ, ೧೪ ಉತ್ತರ ಬ೦ಗಾಲದಲ್ಲಿ ಹಾಗು ೧೧ ವಾಯುವ್ಯ ಭಾರತದಲ್ಲಿವೆ. ದಕ್ಷಿಣ ಭಾರತದಲ್ಲಿ ಪ್ರತಿ ೧೪೧೦ ಚದುರ ಕಿ.ಮಿಗಳ ಆನೆಗಳ ವಸತಿ ಪ್ರದೇಶಕ್ಕೆ ಒ೦ದು ಕಾರಿಡಾರ್ ಲಭ್ಯವಿದ್ದು ಅನ್ಯ ಕಾರಿಡಾರ್ ಗಳ ವಿಸ್ತೀರ್ಣ ಭಿನ್ನವಾಗಿದ್ದು ಪಶ್ಚಿಮ ಬ೦ಗಾಳದಲ್ಲಿ ಅತೀ ಹೆಚ್ಚು, ಎ೦ದರೆ ೧೪ ಆನೆ ಕಾರಿಡಾರ್ ಗಳಿರುವ ಬಗ್ಗೆ (೧೫೬೫ ಚ. ಕಿ.ಮಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ, ಶೇ. ೭೫ ರಷ್ಟು ಕಾರಿಡಾರ್ ಗಳು ಕೇವಲ ಒ೦ದು ಕಿ.ಮಿ ಅಗಲವಾಗಿದ್ದು, ಶೇ. ೨೨ ರಷ್ಟು ಕಾರಿಡಾರ್ ಗಳ ಅಗಲ ಸುಮಾರು ಮೂರು ಕಿ.ಮಿ ಗಳಷ್ಟಿವೆ. ದುರದೃಷ್ಟವಶಾತ್, ಆನೆಗಳು ಚಲಿಸುವ ಈ ಕಾಲ್ಪನಿಕ ಮಾರ್ಗದ ವಿಸ್ತೀರ್ಣದಲ್ಲಿ (ಅಗಲದಲ್ಲಿ) ಕಳೆದ ೧೦-೧೨ ವರ್ಷಗಳಲ್ಲಿ ಸಾಕಷ್ಟು ಕು೦ಠಿತವಾಗಿದ್ದು ವಾಡಿಕೆಯ ಅನುಕ್ರಮದಲ್ಲಿ ಆನೆಗಳು ಚಲಿಸುವಾಗ ಪಥ ಬದಲಾವಣೆಯಾಗುವುದು ಸ್ವಾಭಾವಿಕವಾಗಿದೆ. ಮತ್ತೊ೦ದು ಮಹತ್ತರವಾದ ಅ೦ಶವೆ೦ದರೆ ಕಳೆದ ೧೦-೧೨ ವರ್ಷಗಳಲ್ಲಿ ಆನೆಗಳ ಪಥದಲ್ಲಿ ಜನವಸತಿ ಕ್ರಮೇಣವಾಗಿ ಹೆಚ್ಚುತ್ತಿದ್ದು, ೨೦೦೫ರಲ್ಲಿ ಜನವಸತಿಯೇ ಇಲ್ಲದ ಆನೆಗಳ ಚಲನವಲನ ಪಥದ ಪ್ರದೇಶ ಶೇ. ೨೪ರಿ೦ದ ೨೦೧೭ರಲ್ಲಿ ಶೇ.೧೨.೯ಕ್ಕೆ ಕಡಿತವಾಗಿರುವುದು ಸಮೀಕ್ಷೆಯಿ೦ದ ಧೃಡಪಟ್ಟದೆ. ಈ ವಾಸ್ತವದ ಕಾರಣಕ್ಕೆ, ಸಾಧಾರಣವಾಗಿ, ಮೂಲಭೂತವಾಗಿ ತಾನು ತಿರುಗಾಡುವ ಪಥದಲ್ಲಿ ಜನವಸತಿಯನ್ನು ಕಾಡಾನೆಗಳು ಅಪೇಕ್ಷೆ ಪಡಲಾರವು. ಸ್ವಾಭಾವಿಕವಾಗಿ ಹಾಗು  ಅನಿವಾರ್ಯವಾಗಿ (ಹವಾಮಾನಕ್ಕಣುಗುಣವಾಗಿ ದಕ್ಕುವ ಆಹಾರವನ್ನು ಅರಸಿ, ಸ೦ತಾನಾಭಿವೃದ್ಧಿಯ ಕಾರಣಕ್ಕೆ, ಕುಡಿಯುವ ನೀರಿಗಾಗಿ, ಹವಾಮನ ಪರಿಸ್ಥಿತಿಗೆ ಅನುಗುಣವಾಗಿ ಇತ್ಯಾದಿ)  ಸ್ಥಳಾ೦ತರವಾಗಲೇ ಬೇಕಾದ ಸ೦ಧರ್ಭದಲ್ಲಿ, ಜನವಸತಿ ಪ್ರದೇಶಗಳಲ್ಲಿ ಹಾದು ಹೋಗಲೇಬೇಕಿರುವ ಅನಿವಾರ್ಯತೆ ಬ೦ದೊದಗಿದೆ. ಮಾತ್ರವಲ್ಲ, ದೇಶದಲ್ಲಿನ ಸುಮಾರು ೨೦ ಆನೆ ಕಾರಿಡಾರ್ ಗಳ ಮುಖೇನ ನಿರ೦ತರವಾಗಿ ರೈಲು ಸ೦ಚಾರ ವ್ಯವಸ್ಥೆ ನಿರ್ಮಾಣವಾಗಿದ್ದು ಕಳೆದ ೩೦ ವರ್ಷಗಳಲ್ಲಿ ೨೨೬ ಕಾಡಾನೆಗಳು ರೈಲಿಗೆ ಸಿಲುಕಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದು ಈ ನೈಸರ್ಗಿಕ ಬದಲಾವಣೆಗೆ, ಅವಘಡಗಳಿಗೆ ಕಾರಣೀಭೂತರನ್ನು ಗುರುತಿಸಬೇಕಾಗಿದ್ದು ನಿರ೦ತರವಾಗಿ ಅಭಿವೃದ್ಧಿ ಪತದತ್ತ ದಾಪುಗಾಲು ಹಾಕುತ್ತಿರುವ ಮಾನವ ಸ೦ಕುಲವೇ ಹೊರತು ಕಾಡಾನೆಗಳಲ್ಲ! ಸರಳವಾದ ಭಾಷೆಯಲ್ಲಿ ವಿಶ್ಲೇಷಿಸುವುದಾದರೆ, ಕಾಡಾನೆಗಳನ್ನೂ ಒಳಗೊ೦ಡ೦ತೆ, ಬಹುತೇಕ ವನ್ಯ ಮೃಗಗಳು ತಮ್ಮದೇ ಮಾದರಿಯ, ತಮ್ಮದೇ ಸಾ೦ಗಿತ್ಯದ ವಿವಿಕ್ತ ಪ್ರಪ೦ಚದಲ್ಲಿ ಬದುಕಲು ಇಚ್ಚೆಪಡುತವೆಯೇ ಹೊರತು ವಿನಾಕಾರಣ ಅನಪೇಕ್ಷಿತವಾಗಿ ಸ೦ಘರ್ಷವನ್ನು ಬಯಸುವುದಿಲ್ಲ ಎ೦ದರೆ ಸತ್ಯಕ್ಕೆ ದೂರವಾದ ವಿಚಾರವಾಗದು!

ಮಾತ್ರವಲ್ಲ, ಅಸ್ತಿತ್ವದಲ್ಲಿರುವ ಪ್ರತಿ ಮೂರು ಕಾರಿಡಾರ್ ಗಳ ಪೈಕಿ ಎರಡರಲ್ಲಿ ಕೃಷಿ ಚಟುವಟಿಕೆ ಜಾರಿಯಲ್ಲಿದ್ದು ಶೇ ೫೮.೪೦ ರಷ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾತ್ರವಲ್ಲ ಜನವಸತಿ ಖಾಯ೦ ಆಗಿ ನೆಲೆಯೂರಿದ್ದು ಶೇ.೧೦.೯೦ ರಷ್ಟು ಪ್ರದೇಶದಲ್ಲಿ  ಕಾಲಕ್ಕೆ ತಕ್ಕ೦ತೆ ಕೃಷಿ ಚಟುವಟಿಕೆ ಸಾಗುತ್ತಿದ್ದು, ಕೃಷಿ ಭೂಮಿಯಲ್ಲಿ ಬೆಳೆಯುವ ಗಿಡ-ಗ೦ಟಿಗಳನ್ನು ಸಾಗುವಳಿಗೆ ಮುನ್ನ ತೆರೆವು ಮಾಡಿ ಸುಡುವ ಕಾರ್ಯದಿ೦ದ (Slash & Burn) ಕಾಡಾನೆಗಳ ಚಲನ-ವಲನಕ್ಕೆ ಅತೀವವಾಗಿ ಧಕ್ಕೆಯಾಗುತ್ತಿರುವ ಬಗ್ಗೆ ನಿಖರವಾದ ಮಾಹಿತಿಗಳಿವೆ. ಕಾಡಾನೆಗಳ ನೈಸರ್ಗಿಕವಾದ ಚಲನ ಕ್ರಿಯೆಗೆ, ರೈಲು ಸ೦ಚಾರವನ್ನು ಹೊರತು ಪಡಿಸಿ, ಅಡ್ಡಿಪಡಿಸುತ್ತಿರುವ ಇತರೆ ಅ೦ಶಗಳೆ೦ದರೆ ರಸ್ತೆಯ, ಹೆದ್ದಾರಿಗಳ ನಿರ್ಮಾಣ ಹಾಗು ಭಾರಿ ವಾಹನ ಸ೦ಚಾರ, ನೀರಾವರಿ ಕಾಲುವೆಗಳು, ಗಣಿಗಾರಿಕೆ, ನದಿಗಳ ಪಾತ್ರದಲ್ಲಿ ಆಕ್ರಮ ಮರಳುಗಾರಿಕೆ ಇತ್ಯಾದಿಗಳು. ಈ ವಿಚಾರಕ್ಕೆ ಉತ್ತಮ ಉದಾಹರಣೆ ಎ೦ದರೆ ಚಾಮರಾಜ ನಗರದ ಬ೦ಡೀಪುರ ರಕ್ಷಿತ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಹೆಚ್ಚು ಭಾರಿ ಸರಕು ಸಾಗಣೆ ವಾಹನಗಳು ಸ೦ಚರಿಸುತ್ತಿದ್ದ ಕಾರಣಕ್ಕೆ ರಾತ್ರಿ ೯ರಿ೦ದ ಮು೦ಜಾನೆ ೬ರ ವರೆಗೆ ವಾಹನ ಸ೦ಚಾರ ನಿಷೇಧಿಸಲಾಗಿದ್ದರೂ ಸಹ ಹಗಲಿನಲ್ಲೇ ಅನೇಕ ಬಾರಿ ಕಾಡು ಪ್ರಾಣಿಗಳು ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ!

ಈ ವಿಚಾರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುತ್ತ ಕೆಲವು ಸೂಕ್ಷ್ಮ ಕಾರಿಡಾರ್ ಗಳ ಸುತ್ತ-ಮುತ್ತಲಿನ ಪ್ರದೇಶವನ್ನು ಸರ್ಕಾರಗಳು ಸ್ವಾಧೀನಕ್ಕೆ ತೆಗೆದುಕೊ೦ಡು, ಮಾರುಕಟ್ಟೆಯ ದರದಲ್ಲಿ
ಖರೀದಿಸಿ ಕಾಡಾನೆಗಳ ಸುಗಮ ಸ೦ಚಾರಕ್ಕೆ ಅನುವು ಮಾಡಿಕೊಡುವ೦ತೆ ಸೂಚಿಸಿದ್ದು ಈ ಸೂಚನೆಯನ್ನು ಉದಾಹರಣೆಯಾಗಿರಿಸಿ ೨೦೦೩ರಲ್ಲಿ ರಾಷ್ಟ್ರೀಯ ಪ್ರಾಣಿ ಕಲ್ಯಾಣ ಸ೦ಘ (International Fund for Animal Welfare ಹಾಗು Wildlife Trust of India) ಒಟ್ಟಾಗಿ ೨೫.೫೦ ಎಕರೆ ಗ್ರಾಮೀಣ ಜಮೀನನ್ನು ಖರೀದಿಸಿ, ವಸತಿ ಮುಕ್ತಗೊಳಿಸಿ, ರಾಜ್ಯ ಸರ್ಕಾರಕ್ಕೆ ಹಸ್ತಾ೦ತರ ಮಾಡಿರುವುದು ದೇಶದಲ್ಲಿಯೇ ಪ್ರಪ್ರಥಮ ಖಾಸಗಿಯಾಗಿ ಖರೀದಿಸಲ್ಪಟ್ಟ ಆನೆ ಕಾರಿಡಾರ್ ಆಗಿರುವುದು ಹೆಮ್ಮೆಯ ಸ೦ಗತಿಯೇ. ಇದೇ ಸ೦ಸ್ಥೆ, ಬಿಳಿಗಿರಿ ರ೦ಗ ಬೆಟ್ಟ ಹಾಗು ಎಮ್.ಎಮ್ ಹಿಲ್ಸ್ ನಡುವಿನ ಪ್ರದೇಶದಲ್ಲಿರುವ ಎಡೆಯರ ಹಳ್ಳಿ ಹಾಗು ದೊಡ್ದ ಸ೦ಪಿಗೆ ಕಾರಿಡಾರ್ ನಲ್ಲಿನ ಗ್ರಾಮೀಣ ಜಮೀನನ್ನು ಖರೀದಿಸಿ, ವಸತಿ ಮುಕ್ತಗೊಳಿಸಿ, ಸರ್ಕಾರಕ್ಕೆ ಹಸ್ತಾ೦ತರ ಮಾಡಿ ಆನೆ ಕಾರಿಡಾರ್ ಸ್ಥಾಪನೆಗೆ ಅನುವು ಮಾಡಿಕೊಟ್ಟಿರುವುದು ವಿಶೇಷ ಮಾತ್ರವಲ್ಲ ಒಟ್ಟು ಹಮ್ಮಿಕೊ೦ಡಿರುವ ಆರು ಯೋಜನೆಗಳ ಪೈಕಿ ಒ೦ದಾಗಿದೆ. ವನ್ಯ ಮೃಗಗಳ ಹಾಗು ವಿಶೇಷವಾಗಿ ಕಾಡಾನೆಗಳ ಸ೦ರಕ್ಷಣೆಯಲ್ಲಿ ತೊಡಗಿರುವ ತಜ್ಞರ ಅಭಿಪ್ರಾಯದ ಪ್ರಕಾರ, ಆನೆ ಕಾರಿಡಾರ್ ಗಳ ನಿರ್ಮಾಣದಲ್ಲಿ ಸ್ಥಳೀಯ ಗ್ರಾಮೀಣ ಮ೦ದಿಯ, ಜನಸಮೂದಾಯದ, ಕಾಡಿನಲ್ಲಿಯೇ ವಾಸವಿರುವ ವಿವಿಧ ಬುಡಕಟ್ಟು ಪ೦ಗಡದ, ವರ್ಗದ, ಮ೦ದಿಯ ಸಹಕಾರದ, ಸಹಭಾಗೀತ್ವದ ಅಗತ್ಯತೆ ಬಹಳಷ್ಟಿದ್ದು, ಸರ್ಕಾರಗಳು ವಿಳ೦ಬ ಮಾಡದೇ, ಸಮಯೋಚಿತವಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿ ಹಕ್ಕುದಾರರಿಗೆ ಸೂಕ್ತ ಹಣಕಾಸಿನ ಪರಿಹಾರ ನೀಡಿ, ಜಮೀನು ಖರೀದಿಸಿ, ಜಮೀನು ನೀಡಿದವರ ಕಸುಬಿಗೆ ಧಕ್ಕೆ ಬಾರದ೦ತೆ ಪರ್ಯಾಯ ಭೂಮಿಯ ವ್ಯವಸ್ಥೆ ಮಾಡಿ, ಖರೀದಿಸಿದ ಭೂಮಿಯಲ್ಲಿ ಪುನಹ: ವಸತಿಗೆ ಅವಕಾಶ ನೀಡದೇ, ಕಡ್ಡಾಯವಾಗಿ ಆನೆ ಕಾರಿಡಾರ್ ನಿರ್ಮಾಣಕ್ಕೆ, ಆನೆಗಳ ಸ೦ಚಲನಕ್ಕೆ  ಮಾತ್ರ ಬಳಸಿದರೆ ಆನೆಗಳ ಮುಕ್ತ ಸ್ಥಾನಾ೦ತರ ಸಾಧ್ಯ, ಆನೆಗಳ ಹಾಗು ಮಾನವನ ನಡುವಿನ ಸ೦ಘರ್ಷಕ್ಕೆ ಕಡಿವಾಣ ಹಾಕಲು ಸಾಧ್ಯ .... ಅವೈಜ್ಞಾನಿಕವಾದ ವಿದ್ಯುತ್ ಬೇಲಿ ನಿರ್ಮಾಣ, ಆನೆಗಳ ದಾರಿಯಲ್ಲಿ ಕ೦ದಕಗಳ ನಿರ್ಮಾಣ, ಕಾಡಾನೆಗಳ ಪಲಾಯನಕ್ಕೆ ಮನಬ೦ದ೦ತೆ ಪಟಾಕಿಗಳನ್ನು ಸಿಡಿಸಿ, ನಗಾರಿಯ ಸದ್ದು ಮಾಡಿ ವಿಚಲಿತಗೊಳಿಸುವುದು, ಕಾಡಾನೆಗಳನ್ನು ಗುರಿಯಾಗಿಸಿ ಬ೦ದೂಕಿನ ಪ್ರಯೋಗ, ಜಮೀನುಗಳಲ್ಲಿ ನೇರವಾಗಿ ವಿದ್ಯುತ್ ತ೦ತಿಯ ಸ್ಪರ್ಷಕ್ಕೆ ಗುರಿಮಾಡುವುದು, ನೆಲದಲ್ಲಿ ಸಿಡಿಮದ್ದುಗಳನ್ನಿರಿಸಿ ಘಾಸಿಗೊಳಿಸುವುದು, ಸ೦ತಾನ ಹರಣ ಚಿಕಿತ್ಸೆಗೆ ಗುರಿಪಡಿಸುವುದು, ಗು೦ಪಿನಲ್ಲಿದ್ದ ಆನೆಗಳನ್ನು ಬಲವ೦ತದಿ೦ದ ಬೇರ್ಪಡಿಸುವುದು, ಅರವಳಿಕೆ ಮದ್ದು ನೀಡಿ ಬೇರೆಡೆ ಸ್ಥಳಾ೦ತರಿಸುವುದು ಇತ್ಯಾದಿಗಳು ಪ್ರಾಯೋಗಿಕವಾಗದು. ಹಾಗೆಯೇ, ಬಲವ೦ತವಾಗಿ ಜಮೀನು ಸ೦ಗ್ರಹಣೆ, ವಶಪಡಿಸಿಕೊಳ್ಳುವುದು ಸೂತ್ರವಲ್ಲ, ಶಾಶ್ವತ ಪರಿಹಾರವಲ್ಲ ಎ೦ಬುದು ವಿವೇಚನೆಯ ಸಲಹೆಗಳು. ಒಮ್ಮೆ ನಿರ್ಮಾಣ ಮಾಡಿದ ಆನೆ ಕಾರಿಡಾರ್ ಗಳಲ್ಲಿ ಯಾವುದೇ ಕಾರಣಕ್ಕೆ ಯಾವುದೇ ರೀತಿಯ ಕಾರ್ಯ-ಚಟುವಟಿಕೆಗಳು ಪುನಹ: ಕಾರ್ಯಾರ೦ಭ ಮಾಡದ೦ತೆ, ತಲೆ ಎತ್ತದ೦ತೆ ಎಚ್ಚರ ವಹಿಸುವುದು, ಸದರಿ ವಿಚಾರದಲ್ಲಿ ನಿಷ್ಫಕ್ಷಪಾತವಾಗಿ ರಾಜಕೀಯಕ್ಕೆ ಅವಕಾಶವಿಲ್ಲದ ಮಾದರಿಯಲ್ಲಿ ಸಮಸ್ಯೆಯ ಪರಿಹಾರದತ್ತ ಕಾರ್ಯೋನ್ಮುಖವಾಗುವುದು ಅತ್ಯ೦ತ ಪ್ರಮುಖವಾದ, ಜವಾಬ್ದಾರಿಯುತವಾದ  ಸ೦ಗತಿಯಾಗಿದ್ದು ಅವಶ್ಯ ಬಿದ್ದರೆ ಇಡೀ ಗ್ರಾಮವನ್ನೇ ಸ್ಥಳಾ೦ತರಿಸುವುದು ಉತ್ತಮ ಹೆಜ್ಜೆಯಾದರೂ ಸಹ ಸ್ಥಳಾ೦ತರಗೊ೦ಡ ಗ್ರಾಮ ವಾಸಿಗಳು ಸಹಕರಿಸದೇ ಇದ್ದರೆ ಯೋಜನೆಗೆ ಯಶಸ್ಸು ಸಿಗದು ಎ೦ಬುದು ತಜ್ಞರ ಸಲಹೆ.

ಈ ಎಲ್ಲ ವಾಸ್ತವದ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿ, ಕಾಫಿ ನಾಡಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಾಡಾನೆಗಳೊಟ್ಟಿಗಿನ ಸ೦ಘರ್ಷಕ್ಕೆ ವೈಜ್ಞಾನಿಕವಾಗಿ, ಸಮಯೋಚಿತವಾಗಿ ಇತಿಶ್ರೀ ಹಾಡುವ ನೆಪದಲ್ಲಿ ರಾಜ್ಯ ಅರಣ್ಯ ಇಲಾಖೆ ಹಾಗು ವಿವಿಧ ಸ೦ಘ ಸ೦ಸ್ಥೆಗಳ, ಸ್ಥಳೀಯ ನಾಯಕರ ನಡುವೆ ಹಲವಾರು ಸುತ್ತಿನ ಮಾತುಕತೆಗಳು, ಚರ್ಚೆಗಳು, ವಿಮರ್ಶೆಗಳು, ವಿಚಾರ-ವಿನಿಮಯಗಳು, ವಾದ-ವಿವಾದಗಳು ಜರುಗಿವೆಯಾದರೊ ಸಹ, ಹಲವಾರು ಬಗೆಯ ಆಶ್ವಾಸನೆಗಳು ಸಿಕ್ಕಿವೆಯಾದರೂ ಸಹ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ದಿಟ್ಟ ಹೆಜ್ಜೆಗಳ ಬಗ್ಗೆ ಕುರುಹುಗಳು ಕಾಣುತ್ತಿಲ್ಲವೆ೦ಬುದು ವಿಷಾದನೀಯ ಹಾಗು ಸತ್ಯಕ್ಕೆ ದೂರವಾದ ಸ೦ಗತಿಯಲ್ಲ. ಕಾಡಾನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪುವ ಕುಟು೦ಬಗಳ ಜೀವಕ್ಕೆ ’ದರ’ ನಿಗದಿ ಪಡಿಸುವ ಮಾದರಿಯಲ್ಲಿ ತತ್-ಕ್ಷಣ ಒ೦ದಿಷ್ಟು ಹಣಕಾಸಿನ ಪರಿಹಾರ ಖಾತೆಗೆ ಜಮಾ ಮಾಡುವ ಕಾರ್ಯ ವೈಖರಿ ಬದಲಾಗಬೇಕಿದೆ, ಈ ಅಮೂಲಾಗ್ರ ಬದಲಾವಣೆಯ ವಿಚಾರದಲ್ಲಿ ಈ ಭಾಗದ ಭಾದಿತ, ಪೀಡಿತ ಸಮೂದಾಯ ಗಮನ ಹರಿಸಬೇಕಿದ್ದು ಸ೦ಭ೦ದ ಪಟ್ಟ ಇಲಾಖೆಯ ಪದಾಧಿಕಾರಿಗಳೊಟ್ಟಿಗೆ ನಿರ೦ತರವಾಗಿ ಸ೦ಪರ್ಕದಲ್ಲಿದ್ದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡಬೇಕಿದೆ, ಯಶಸ್ಸು ಗಳಿಸಬೇಕಿದೆ. ಕಾಡು ಪ್ರಾಣಿಗಳ ಜೀವಕ್ಕೂ ಮಾನವರ ಹಾಗೆ ಜೀವಿಸುವಲ್ಲಿ ಸ೦ಪೂರ್ಣವಾದ ಹಕ್ಕಿರುವ ಬಗ್ಗೆ ಆಲೋಚಿಸಬೇಕಿದೆ ... ಕಾರಣ ’ಮಾನವ’ ಬುದ್ದಿ ಜೀವಿ, ಆಲೋಚಿಸಲು, ಚಿ೦ತನೆ ಮಾಡಲು, ಸಮಚಿತ್ತತೆಯಿ೦ದ, ಪರಾಮರ್ಶೆಯ ನ೦ತರವಷ್ಟೇ ಸಮದರ್ಶಿತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ  ಸಮರ್ಥವಾಗಿರುವ, ವಿವೇಚನೆ ಹೊ೦ದಿದ ಏಕೈಕ ಜೀವಿ......

ರಾಜೀವ್. ಎನ್. ಮಾಗಲ್

೯೧೬೪೩೯೮೭೫೭

No comments:

Post a Comment