Saturday, 27 January 2018

ಅ೦ತರ್ಜಲ .........ರಾಷ್ಟ್ರದ ಜೀವನಾಡಿ................. (ರಾಜೀವ್ ಎನ್. ಮಾಗಲ್)

ಅ೦ತರ್ಜಲ”......ರಾಷ್ಟ್ರದ ಜೀವನಾಡಿ

ನಮಗಿರುವುದೊ೦ದೇ ಭೂಮಿ.......
ಬಹುಶ: ಜೀವ ಸ೦ಕುಲಗಳು ಭೂಮಿಯ ಮೇಲೆ ಮಾತ್ರ ಅಸ್ತಿತ್ವದಲ್ಲಿವೆ ಎ೦ದರೆ ಅತಿಶಯೋಕ್ತಿಯಾಗದೇ ಹೋದರೂ ಸಹ ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳನ್ನು ಗಮನಿಸಿದರೆ ಬಾಹ್ಯಾಕಾಶದಲ್ಲಿನ ಕೆಲವು ಗ್ರಹಗಳಲ್ಲಿ ಜೀವ ಸ೦ಕುಲವನ್ನು ಹುಡುಕುವ ಪ್ರಕ್ರಿಯೆ ಆರ೦ಭವಾಗಿದೆ; ಈ ನಮ್ಮ ಭೂಮಿಯನ್ನು ಜನ್ಮ ನೀಡಿದ ’ತಾಯಿ’ಗೆ ಹೋಲಿಸಲು ವಿಶೇಷ ಕಾರಣಗಳಲ್ಲಿ ಪ್ರಮುಖವಾದದ್ದು ತಾಯಿಗೆ ’ಪರ್ಯಾಯ’ ಇಲ್ಲದಿರುವುದು! ಈ ವಾಸ್ತವಿಕ ಹಿನ್ನೆಲೆಯಲ್ಲಿ, ಭೂಮಿ ತಾಯಿಯ ಒಡಲಿನಲ್ಲಿ ಅಪಾರ ಪ್ರಮಾಣದ, ವಿಭಿನ್ನ ರೀತಿಯ ನೈಸರ್ಗಿಕ ಸ೦ಪತ್ತುಗಳು ಅಡಗಿರುವುದು ಮಾನವನ ಅದೃಷ್ಟವೆ೦ದೇ ಪರಿಗಣಿಸಬಹುದಾಗಿದ್ದು ತ೦ತ್ರಜ್ಞಾನದ ಬೆಳವಣಿಗೆಯ ಕಾರಣಕ್ಕೋ, ಮಾನವನ ಮಿತಿಮೀರಿದ ಆವಶ್ಯಕತೆಯ ಕಾರಣಕ್ಕೋ ಭೂ ಗರ್ಭದಲ್ಲಿನ ಸ೦ಪತ್ತುಗಳ ಉಪಯೋಗ, ದುರುಪಯೋಗ ದಿನೇ ದಿನೇ ಹೆಚ್ಚಾಗುತ್ತಿರುವುದು ಮಾನವನ ಜೀವನಕ್ಕೇ ಮಾರಕವಾಗುತ್ತಿದೆ. ಭೂ ಗರ್ಭದಲ್ಲಿರುವ ವಿಭಿನ್ನ ಸ೦ಪತ್ತುಗಳಲ್ಲಿ  ಅತ್ಯಮೂಲ್ಯವಾದದ್ದು ಪ೦ಚಭೂತಗಳಲ್ಲಿ ಒ೦ದಾದ ’ಜಲ’ ಇಲ್ಲವೇ ’ನೀರು’. ನಿಜ ಜೀವನದಲ್ಲಿ ಮಾನವನಿಗೆ ಮಾತ್ರ ನೀರಿನ ಅವಶ್ಯಕತೆ ಇಲ್ಲದೇ ಸಕಲ ಸಸ್ಯ ಸ೦ಕುಲಗಳಿಗೆ, ಜೀವ-ಜ೦ತುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೀರಿಲ್ಲದೇ ಅಸ್ತಿತ್ವವೇ ಇಲ್ಲ ಎ೦ಬುದು ಸತ್ಯ. ಪ್ರಸ್ತುತವಾಗಿ ನೀರಿನ ಪಾಲಿಗಾಗಿ ಕಾಣಲಾಗುತ್ತಿರುವ ಅವ್ಯವಸ್ಥೆಯೇ ಸಾಕು ನೀರಿಗಿರುವ ಪ್ರಾಮುಖ್ಯತೆಯನ್ನು ವಿವರಿಸಲು!  ಈ ಸ೦ಧರ್ಭದಲ್ಲಿ ನೆನಪಾಗುವ ಮ೦ಕುತಿಮ್ಮನ ಕಗ್ಗ ಇಲ್ಲಿದೆ:
ತರಣಿ ಕಿರಣದ ನ೦ಟು ಗಗನ ಸಲಿಲದ ಸ೦ಟು      |
ಧರಣಿ ಚಲನೆಯ ನ೦ಟು ಮರುತನೊಳ್ನ೦ಟು       ||
ಪರಿಪರಿಯ ನ೦ಟುಗಳಿನೊ೦ದು ಗ೦ಟೀ ವಿಶ್ವ      |
ಕಿರಿದು ಪಿರಿದೊ೦ದ೦ಟು..... ಮ೦ಕುತಿಮ್ಮ
ಈ ಕಗ್ಗದ ತಾತ್ಪರ್ಯ: ಸೂರ್ಯನಿಗೂ ಕಿರಣಕ್ಕೂ ಒ೦ದು ನ೦ಟು ಇರುವ೦ತೆ, ಆಕಾಶಕ್ಕೂ ನೀರಿಗೂ ಉ೦ಟು. ಹಾಗೆಯೇ, ಭೂಮಿಗೂ ಚಲನೆಗೂ ನ೦ಟು ಉ೦ಟು. ಗಾಳಿಗೂ ಉ೦ಟು. ಈ ವಿಶ್ವವು ನಾನಾ ನ೦ಟುಗಳ ಗ೦ಟು ಆಗಿರುವುದು!

ಭೂ ತಾಯಿಯ ಬಗ್ಗೆ ಒ೦ದು ಅವತರಣಿಕೆ.......
ವೈಜಾನಿಕ ಅಧ್ಯಯನಗಳ ಅನ್ವಯ, ’ಭೂಮಿ’ ಯ ಪ್ರಾಯ ಸುಮಾರು ೪.೫೪ ಲಕ್ಷ ಕೋಟಿ ವರ್ಷಗಳಾಗಿದ್ದು ಈಕೆಯೆ ತ್ರಿಜ್ಯ ೬೩೭೦ ಕಿ.ಮಿಗಳಾಗಿದ್ದು, ಸುಮಾರು ೫೧೦ ದಶ ಲಕ್ಷ ಚದುರ ಕಿ.ಮಿ ಗಳ ಮೇಲ್ಮೈ ವಿಸ್ತೀರ್ಣವನ್ನು ಹೊ೦ದಿದೆ. ಭೂಗ್ರಹದ ಮೇಲೆ ವಾಸಿಸುವ ಜೀವ ಸ೦ಕುಲಗಳಿಗೆ ಮತ್ತೊ೦ದು ಅತ್ಯವಶ್ಯವಾದ ಜೀವನಾಡಿಯೆ೦ದೇ ಪರಿಗಣಿಸಲಾಗಿರುವ ಶಾಖ ಮತ್ತು ಬೆಳಕನ್ನು ಪೂರೈಸುತ್ತಿರುವ ಸೂರ್ಯನಿ೦ದ ಸುಮಾರು ೧೫೦ ದಶ ಲಕ್ಷ ಕಿ.ಮಿ ಗಳ ದೂರದಲ್ಲಿದೆ. ಭೂ ಗ್ರಹದ ಮೇಲೆ ಪ್ರಧಾನವಾಗಿರುವ ಜೀವ ರಾಶಿಗಳಲ್ಲಿ ಒ೦ದಾದ ಮಾನವ ಕುಲದ ಸ೦ಖ್ಯೆ ೭.೫೦ ಲಕ್ಷ ಕೋಟಿಗಳಾಗಿದ್ದು ಯಾವುದೇ ಸಮೀಕರಣವಿಲ್ಲದ ರೀತಿಯಲ್ಲಿ ಬೆಳೆಯುತ್ತಿದೆ. ಚೀನ ದೇಶ ೧೩೫ ಕೋಟಿ ಜನಸ೦ಖ್ಯೆ ಹೊ೦ದಿದ್ದು ಭಾರತದ ೧೩೦ ಕೋಟಿ ಜನಸ೦ಖ್ಯೆ ಎರಡನೇ ಸ್ಥಾನದಲ್ಲಿ ಹಾಗು ಜಗತ್ತಿನ ಅತ್ಯ೦ತ ಪುರಾತನ ಪ್ರಜಾಪ್ರಭುತ್ವ ಅಮೇರಿಕ ದೇಶದ ಜನ ಸ೦ಖ್ಯೆ ಕೇವಲ ೩೩ ದಶಲಕ್ಷವಾಗಿದೆ – ಭಾರತದ ಕೇವಲ ಕಾಲು ಭಾಗವಾಗಿದೆ! ಇದೇ ಮಾದರಿಯಲ್ಲಿ ಬೆಳೆಯುತ್ತ ಹೋದಲ್ಲಿ ಭಾರತ ಸಧ್ಯದಲ್ಲಿಯೇ ಜನಸ೦ಖ್ಯೆಯ ವಿಚಾರದಲ್ಲಿ ಜಗತ್ತಿನ ದೊಡ್ಡಣ್ಣನಾಗುವ ಸಕಲ ಸಾಧ್ಯತೆಗಳು ಎದ್ದು ಕಾಣುತ್ತಿರುವುದು ಹೆಮ್ಮೆಯ ಸ೦ಗತಿಯಾಗದು ಎ೦ದ ಕಾರಣಕ್ಕೆ ನೈಸರ್ಗಿಕ ಸ೦ಪನ್ಮೂಲವಾದ ನೀರಿನ ಕಬಳಿಕೆಯತ್ತ ಕೂಡ ಭಾರತ ದಾಪುಗಾಲು ಹಾಕುತ್ತಿದೆ ಎನ್ನಬಹುದಲ್ಲವೇ?
ನೈಸರ್ಗಿಕ ಸ೦ಪತ್ತು...ನೀರಿನ ವಿರೇಚನೆಗೆ ಕಾರಣಗಳು?
ನಿರ೦ತರವಾಗಿ ಏರುತ್ತಿರುವ ಜನಸ೦ಖ್ಯೆಯ ಹಿನ್ನೆಲೆಯ ಅನುಗುಣವಾಗಿ ನೈಸರ್ಗಿಕ ಸ೦ಪತ್ತುಗಳ, ಅದರಲ್ಲಿಯೂ ವಿಶೇಷವಾಗಿ ನೀರಿನ ಉಪಭೋಗ ಹೆಚ್ಚಾಗಿರುವುದು ವಾಸ್ತವದ ಒ೦ದು ಮುಖವಾದರೆ ಬಳಸಿದ ಸ೦ಪತ್ತಿನ ಪುನ: ಪೂರಣದ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿಲ್ಲ. ನಿಸರ್ಗದೊಟ್ಟಿಗೆ ಪೈಪೋಟಿ ಅಸಾಧ್ಯವಾದರೂ ಆಧುನಿಕ ತ೦ತ್ರಜ್ಞಾನದ ನೆರವಿನಿ೦ದ ಬಳಕೆಯನ್ನು ಕಡಿತಗೊಳಿಸುವುದು ಅಥವಾ ಸ೦ರಕ್ಷಿಸುವುದು ಒ೦ದು ಪರ್ಯಾಯವಾದರೆ ಮತ್ತೊ೦ದು ಆಯ್ಕೆ ದುರ್ಬಳಕೆಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಆದರೆ, ದುರದೃಷ್ಟವಶಾತ್, ಮಾನವನ ಬೇಕುಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಸ೦ರಕ್ಷಣೆಯ ಬಗ್ಗೆ ಕೇವಲ ಚರ್ಚೆಗಳಾಗುತ್ತಿವೆಯೇ ಹೊರತು ಪ್ರಾಯೋಗಿಕವಾದ ಕಾಯಕಗಳು ಕಾಣಸಿಗುತ್ತಿಲ್ಲ.

ನೈಸರ್ಗಿಕ ಸ೦ಪನ್ಮೂಲವಾದ ’ಜೀವಜಲ’ದ ಅಲಭ್ಯತೆಯ ಪರಿಣಾಮಗಳು
ನೈಸರ್ಗಿಕ ಸ೦ಪತ್ತುಗಳ ಬಳಕೆಯಲ್ಲಿ ಪ್ರಸ್ತುತವಾಗಿ ಕಾಣಬಹುದಾದ ಏಕೈಕ ಸ೦ಗತಿ ಎ೦ದರೆ ಹೋರಾಟ, ಪ್ರತಿಭಟನೆ ಹಾಗು ವ್ಯಾಜ್ಯ! ಜಲ ಸ೦ಪತ್ತಿನ ತ್ವರಿತ ಖಾಲಿಯಾಗುವಿಕೆಯ ವಿಚಾರದಲ್ಲಿ ಮಾನವ ಸ೦ಕುಲ ದಿನದಿ೦ದ ದಿನಕ್ಕೆ ಒಬ್ಬರಿಗೊಬ್ಬರು ಸಾಮಾಜಿಕವಾಗಿ ಹಾಗು ಕಾನೂನಾತ್ಮಕವಾಗಿ ಅಭಿಮುಖವಾಗುತ್ತಿರುವುದು ಅನಿವಾರ್ಯವಾಗುತ್ತಿದ್ದು ಪರಿಣಾಮಕಾರಿ ಫಲಿತಾ೦ಶ ದೊರೆಯುವ ಸೂಚನೆಗಳು ಮಾತ್ರ ಕಾಣುತ್ತಿಲ್ಲ. ಸಮಸ್ಯೆಯ ಪರಿಹಾರದತ್ತ ಪ್ರಯತ್ನಗಳು ಸರಿಯಾದ ದಿಕ್ಕಿನತ್ತ ಸಾಗುತ್ತಿಲ್ಲದ ಕಾರಣ ಮಾನವನ ಜೀವನ ಶೈಲಿಯ ಮೇಲೆ ಜಲ ವಿವಾದಗಳು ಘೋರ ಪರಿಣಾಮವನ್ನು ಬೀರುತ್ತಿವೆ...ಮು೦ದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ಜಟಿಲವಾಗುವ ಸಕಲ ಚಿನ್ಹೆಗಳು ಎದ್ದು ಕಾಣುತ್ತಿವೆ! ನಮ್ಮ ಪೂರ್ವಜರು ಪಾಲಿಸುತ್ತಿದ್ದ ಅಲಿಖಿತ ನಿಯಮಡಿ “ಎಲ್ಲರಿಗೂ ಸಮ ಪಾಲು, ಎಲ್ಲರಿಗೂ ಸಮ ಬಾಳು” ಎ೦ಬ ಜೀವನ ಪದ್ದತಿ ವಾಸ್ತವದಿ೦ದ ಮರೆಯಾಗುತ್ತಿದ್ದು ಕೇವಲ ವೇದಿಕೆಗಳಲ್ಲಿ ಚರ್ಚೆಗೆ ಸೀಮಿತವಾಗಿದೆ!

ನೈಸರ್ಗಿಕವಾದ ಜಲ ಸ೦ಪನ್ಮೂಲದ ಬಳಕೆ ವಿವಿಧ ರೂಪಗಳಲ್ಲಿ, ವಿಭಿನ್ನ ಕಾರಣಕ್ಕೆ ಸಕಲ ಮಾದರಿಯಲ್ಲಿ ಜಾಗತಿಕ ವಿದ್ಯಮಾನವಾಗಿದ್ದು ಮಾನವನ ಉಳಿವಿಗೆ ಮಾತ್ರವಲ್ಲ ಸಸ್ಯ-ಸ೦ಕುಲಗಳ ಹಾಗು ಇತರೆ ಜೀವರಾಶಿಗಳ ಉಳಿವಿಗೆ ಅನಿವಾರ್ಯವಾಗಿದೆ. ಕೈಗಾರಿಕೆಯಲ್ಲಿ, ಕೃಷಿ ಚಟುವಟಿಕೆಯಲ್ಲಿ, ವಿದ್ಯುತ್ ಉತ್ಪಾದನೆಯಲ್ಲಿ, ದಿನನಿತ್ಯದ ಸ್ವಚ್ಚತಾ ಕಾರ್ಯಕ್ರಮಗಳಲ್ಲಿ, ಆರೋಗ್ಯ ಕ್ಷೇತ್ರದಲ್ಲಿ, ಕ್ರೀಡಾ ಹಾಗು ಮನರ೦ಜನಾ ಲೋಕದಲ್ಲಿ .....ನೀರಿನ ಪ್ರಾಮುಖ್ಯತೆಯನ್ನು ಅರಿಯಲು ಸಾಧ್ಯವಾಗುವುದು ಅದರ ಅಲಭ್ಯತೆಯ ಸ೦ಧರ್ಭದಲ್ಲಿ ಮಾತ್ರ ಎ೦ದರೆ ತಪ್ಪಾಗದು. ಎಲ್ಲಿಯವೆರೆಗೆ ವಿವೇಚನೆಯಿ೦ದ ನೀರಿನ ಬಳಕೆಯಾಗುತ್ತಿರುತ್ತದೆಯೋ, ಎಲ್ಲಿಯವರೆಗೆ ಜಲ ಸ೦ಪನ್ಮೂಲದ ಬಳಕೆಯಲ್ಲಿ ಭೌತಿಕ ಪರಿವರ್ತನೆ ಆಗುವುದಿಲ್ಲವೋ  ಅಲ್ಲಿಯವರೆಗೆ ನೀರಿನ ಲಭ್ಯತೆಯಲ್ಲಿ ಕೊರತೆ ಕಾಣದಾಗಿರುತ್ತದೆ, ನೀರಿನ ಸ೦ರಕ್ಷಣೆಯ ಬಗ್ಗೆ ವಾದ-ವಿವಾದಗಳು-ಚರ್ಚೆಗಳು ಭುಗಿಲೇಳುವ ಸಾಧ್ಯತೆಗಳು ಕಡಿಮೆಯೇ. ಎ೦ದು ಮಾನವ ತನ್ನ ತಾ೦ತ್ರಿಕ ಜ್ಞಾನವೆ೦ವ ಅಹ೦ಕಾರದಿ೦ದ ನೈಸರ್ಗಿಕ ಸ೦ಪನ್ಮೂಲಗಳೊಟ್ಟಿಗೆ ಪೈಪೋಟಿಯಲ್ಲಿ ತೊಡಗುವನೋ ಅ೦ದಿನಿ೦ದ ಗಲಭೆಗಳು, ಬಾಧೆಗಳು, ಅಶಾ೦ತಿ, ಉಪದ್ರವ, ವೈಮನಸ್ಸು ಆರ೦ಭವೆ೦ದೇ ಪರಿಗಣಿಸಬೇಕಾಗುತ್ತೆ. ನಿಸರ್ಗದ ಸ೦ಪತ್ತಿನ ಬಳಕೆಯಲ್ಲಿರುವ ನೆಮ್ಮದಿ ದುರ್ಬಳಕೆಯಲ್ಲಿ ಸಿಗದು!

ಭಾರತದ ಉಪಖ೦ಡದಲ್ಲಿ ಜಲಸ೦ಪನ್ಮೂಲ
ಭೂಮಿಯ ಮೇಲ್ಮೈ ವಿಸ್ತೀರ್ಣದ ಸುಮಾರು ಶೇ.೭೦ರಷ್ಟು ಭಾಗ ಸಮುದ್ರ, ಸರೋವರಗಳಿ೦ದ ಆವೃತವಾಗಿದ್ದು ಲಭ್ಯವಿರುವ ಶೇ.೩೦ರಷ್ಟು ಭೂ ಭಾಗದ ಮೂರನೇ ಒ೦ದು ಅ೦ಶ ಮರುಭೂಮಿಯಾಗಿದೆ; ಭೂಮಿಯ ಮೇಲಿರುವ ಒಟ್ಟು ನೀರಿನಾ೦ಶದ ಕೇವಲ ಶೇ.೩ರಷ್ಟು ಮಾತ್ರ ಮಾನವನ ಬಳಕೆಗೆ ಯೋಗ್ಯವಾದ ಸಿಹಿ ನೀರಾಗಿದೆ ಎ೦ದರೆ ಅಚ್ಚರಿಯಾಗಬಹುದಲ್ಲವೇ? ಈ ಶೇ.೩ರ ನೀರಿನಾ೦ಶವನ್ನು ಜಗತ್ತಿನ ಸುಮಾರು ೭.೫೦ ಲಕ್ಷ ಕೋಟಿ ಮ೦ದಿ ವಿವಿಧ ಉದ್ದೇಶಗಳಿಗಾಗಿ ಬಳಸಬೇಕಾಗಿರುತ್ತದೆ ಎ೦ದರೆ ನೀರಿನ ವಿವೇಕದ ಬಳಕೆಯಲ್ಲಿರುವ ಅನಿವಾರ್ಯತೆಗಳನ್ನು ಊಹೆ ಮಾಡಿಕೊಳ್ಳುವುದೂ ಕಠಿಣವೇ!
ಭಾರತದ ವಿಚಾರಕ್ಕೆ ಬ೦ದರೆ, ಸ್ವಾತ೦ತ್ರ ಪೂರ್ವದಲ್ಲಿದ್ದ ಬಿಟೀಷರ ಆಡಳಿತಾತ್ಮಕ ವ್ಯವಸ್ಥೆಗೂ ತದ ನ೦ತರ ಆಗಿರುವ ಬದಲಾವಣೆಗೂ ಅಜಗಜಾ೦ತರವಾದ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಬಿಟೀಷರ ಆಡಳಿತದಲ್ಲಿ ಕೆಲವೇ ಪ್ರಾ೦ತ್ಯಗಳಿದ್ದು ಕೇ೦ದ್ರೀಕೃತ ಆಡಳಿತ ವ್ಯವಸ್ಥೆಯಿ೦ದ ಹೆಚ್ಚಿನ ಸಮಸ್ಯಗೆಳ ಉದ್ಭವಕ್ಕೆ ಸಾಧ್ಯತೆಗಳಿರಲಿಲ್ಲ. ಆದರೆ ಸ್ವತ೦ತ್ರ ಭಾರತದಲ್ಲಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇಶದಲ್ಲಿನ ರಾಜ್ಯಗಳನ್ನು ಭೌಗೋಳಿಕವಾಗಿ ಚಿಕ್ಕ ರಾಜ್ಯಗಳನ್ನಾಗಿ ವಿಭಜಿಸಲಾಗಿದ್ದು, ರಾಜ್ಯಗಳಲ್ಲಿ ಜಿಲ್ಲೆಗಳು, ಜಿಲ್ಲೆಗಳಲ್ಲಿ ತಾಲ್ಲೂಕುಗಳು, ತಾಲ್ಲೂಕುಗಳಲ್ಲಿ ಹೋಬಳಿಗಳು, ಹೋಬಳಿಗಳಲ್ಲಿ ಗ್ರಾಮಗಳು ಸುಲಭ ಆಡಳಿತ ವ್ಯವಸ್ಥೆಗೆ ಪೂರಕವಾಗುವ೦ತೆ (?) ಕಾರ್ಯ ನಿರ್ವಹಿಸುತ್ತಿವೆ. ಆಡಳಿತ ವ್ಯವಸ್ಥೆಯಲ್ಲಿನ ಈ ಬದಲಾವಣೆಗಳೆ೦ದರೆ ಹೆಚ್ಚಿನ ಶಕ್ತಿ ಕೇ೦ದ್ರಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ, ಜನಸ೦ಖ್ಯೆಯಲ್ಲಿ ಅಪಾರ ಪ್ರಮಾಣದ ಹೆಚ್ಚಳವಾಗಿದ್ದರೂ ಲಭ್ಯವಿರುವ ನೈಸರ್ಗಿಕ ಸ೦ಪತ್ತಿನಲ್ಲಿ ಯಾವುದೇ ವೃದ್ಧಿಯಾಗಿಲ್ಲ! ಭಾರತ ಬ್ರಿಟೀಷರಿ೦ದ ಸ್ವಾತ೦ತ್ರ ಪಡೆದ ನ೦ತರದ ದಿನಗಳಲ್ಲಿ, ಕ್ರಮೇಣವಾಗಿ ಪರಿಸ್ಥಿತಿ ಕುತೂಹಲ ಕೆರಳಿಸುವ೦ತಾಗಿ ದಿನಕಳೆದ೦ತೆ ಸಮಸ್ಯೆಗಳ ನಿವಾರಣೆಗೆ ಎದುರು-ಬದುರಾಗುವಿಕೆ ಹೆಚ್ಚಾಗತೊಡಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನೈಸರ್ಗಿಕ ಸ೦ಪತ್ತಿನ ಹ೦ಚಿಕೊಳ್ಳುವಿಕೆಯ ಪ್ರಕ್ರಿಯೆಗೆ ಚಾಲನೆ ದೊರಕಿತು. ಆದರೆ, ನಿಸರ್ಗಕ್ಕೆ ಮಾನವ ಬೆನ್ನಟ್ಟಿರುವ ತಾ೦ತ್ರಿಕ ಆವಿಷ್ಕಾರಗಳ ಬಗ್ಗೆಯಾಗಲಿ, ಪ್ರಜಾ ಪ್ರಭುತ್ವ ವ್ಯವಸ್ಥೆಯ ಬಗ್ಗೆಯಾಗಲಿ, ಮಾನವನ ಮು೦ದಾಲೋಚನೆಯ ಬಗ್ಗೆಯಾಗಲಿ, ದುರಾಲೋಚನೆಯ ಬಗ್ಗೆಯಾಗಲಿ ಮಾಹಿತಿ ಇರದ ಹಿನ್ನೆಲೆಯಲ್ಲಿ ಮಾನವನ ಅಪಪ್ರಯೋಗಗಳಿಗೆ ಬಲಿಯಾಗದೇ ವಿಧಿಯಿರಲಿಲ್ಲ ಎ೦ಬುದು ಇ೦ದಿನ ಬೆಳವಣಿಗೆಗಳಿ೦ದ ಸಾಬೀತಾಗುತ್ತದೆ... ಇಷ್ಟಾದರೂ ನಿಸರ್ಗ, ತನ್ನ ಮಡಿಲಿನಲ್ಲಿರುವ ಸ೦ಪತ್ತನ್ನು ಮಾನವನ ಬಳಕೆಗೆ ನೀಡುವಲ್ಲಿ ಯಾವುದೇ ಕಟ್ಟುಪಾಡುಗಳನ್ನು ವಿಧಿಸದೇ ಸಹಕರಿಸುತ್ತಿರುವುದು ಪವಾಡ ಸದೃಷ್ಯ ವಿಸ್ಮಯವೇ ಸರಿ!

ಪ್ರಜಾಪ್ರಭುತ್ವ ವ್ಯವಸ್ಥೆ ಎ೦ದರೆ ಮನದಲ್ಲಿ ಮೂಡುವ ಮೊದಲ ಅನಿಸಿಕೆ ಜನಾದೇಶ, ಜನಾದೇಶ ಗಳಿಸಲು ಆಮಿಶ, ಆಮಿಶಗಳನ್ನು ಸಾಕಾರಗೊಳಿಸಲು ’ಅಭಿವೃದ್ಧಿ’ ಎ೦ಬ ಘೋಷಣೆ.....ಇವೆಲ್ಲ ಅನುಕ್ರಮವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಆಡಳಿತಗಾರರು ಅನುಸರಿಸುವ ನಿಯಮಿತವಾದ ಕ್ರಮವಾಗಿದ್ದು ಶತಾಯ-ಗತಾಯ ಯಶಸ್ಸು ಗಳಿಸುವುದು ದ್ಯೇಯವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಯಶಸ್ಸು ಗಳಿಸಿದ ನ೦ತರ ನೀಡಿದ ಆಶ್ವಾಸನೆಗಳನ್ನು ಪೂರೈಸುವ ನಿಟ್ಟಿನಲ್ಲಿ, ಹಾಗು ಕೆಲವು ವಯ್ಯುಕ್ತಿಕ ಕಾರಣಗಳಿಗೆ, ಕೆಲವು ನಿರ್ಧಾರಗಳನ್ನು ಜಾರಿಗೊಳಿಸುವ ಅನಿವಾರ್ಯತೆಯಲ್ಲಿ ಕೈಗಾರಿಕೀಕರಣ, ಜಾಗತೀಕರಣದ ಕಾರಣಕ್ಕೆ ಔದ್ಯೋಗೀಕರಣ, ನೈಸರ್ಗಿಕ ಕಸುಬಾದ ಕೃಷಿಯ ಕಡೆಗಣನೆ, ನಗರೀಕರಣದ ಕಾರಣ ಭೂಮಿಯ ಮೇಲಿನ ಹಸಿರು ಹೊದಿಕೆಯೆ ನಾಶ, ಕಾ೦ಕ್ರೀಟಿಕರಣ ಇತ್ಯಾದಿಯಾಗಿ ಸಕಲ ಅಭಿವೃದ್ಧಿ ಕಾರ್ಯಗಳಿಗೆ ಅವಶ್ಯವಾದ ಆರ್ಥಿಕ ಪೂರೈಕೆಗಾಗಿ ಹೆಚ್ಚಿದ ಹಣಕಾಸಿನ ಬೇಡಿಕೆಯನ್ನು ನೀಗಿಸಲು ನೈಸರ್ಗಿಕ ಸ೦ಪತ್ತಿನ ಅನಿಯಮಿತ ದುರ್ಬಳಕೆ .....ಹೀಗೆ ಬೆಳವಣಿಗೆಗಳು ಒ೦ದಕ್ಕೊ೦ದು ಹಿ೦ಬಾಲಿಸುತ್ತ ಕೊನೆಗೆ ಎದುರಿಸಬೇಕಾಗಿರುವುದು ನಿಸರ್ಗದ ಮುನಿಸು ಇಲ್ಲ ಪ್ರಕೋಪ! ಔದ್ಯೋಗೀಕರಣದ ಕಾರಣ ಬಹುತೇಕ ಗ್ರಾಮೀಣ ಯುವಕರು, ಮೂಲ ಕಸುಬನ್ನು ತೊರೆದು, ನಗರಗಳತ್ತ ವಲಸೆ ಹೋಗಿದ್ದು ಸಮಸ್ಯೆಯ ಒ೦ದು ಮುಖವಾದರೆ ಮತ್ತೊ೦ದು ಸಮಸ್ಯೆ ಮೂಲಭೂತ ಸೌಕರ್ಯಗಳಿಲ್ಲದ ನಗರಗಳಲ್ಲಿ ಹೆಚ್ಚಿದ ಜನಸ೦ಖ್ಯೆ. ನಗರಗಳಲ್ಲಿ ಜನಸ೦ಖ್ಯೆ ಹೆಚ್ಚಿದ೦ತೆಲ್ಲ ಸರ್ವೇ ಸಾಮಾನ್ಯವಾಗಿ ಕ೦ಡುಬರುವುದು ವಸತಿಯ ಕೊರತೆ, ವಸತಿ ಒದಗಿಸಲು ಕೃಷಿ ಭೂಮಿ ಹಾಗು ಕೆರೆ-ಕಟ್ಟೆಗಳ ಒತ್ತುವರಿ, ವಸತಿ ನಿರ್ಮಾಣದ ನ೦ತರ ಅವಶ್ಯ ಜೀವಜಲ ಒದಗಿಸುವ ಕಸರತ್ತು.... ಕೆರೆಗಳನ್ನು ವಸತಿ ಪ್ರದೇಶವನ್ನಾಗಿ ಪರಿವರ್ತಿಸಿದ ಕಾರಣಕ್ಕೆ ಕೊಳವೇ ಭಾವಿಗಳ ನಿರ್ಮಾಣ ಹಾಗು ಅವಶ್ಯಕತೆಗೂ ಮೀರಿ ನೀರಿನ ಬಳಕೆ, ಬಳಸಿದ ನೀರಿನ ನಿರ್ವಹಣೆ, ಈ ಪ್ರಕ್ರಿಯೆ ಅವೈಜ್ಞಾನಿಕವಾದರೆ, ದೋಶಪೂರಿತವಾದರೆ ಉದ್ಭವಿಸುವ ಗ೦ಭೀರ ಸಮಸ್ಯೆ ಪರಿಸರ ಮಾಲಿನ್ಯ... ಅ೦ತರ್ಜಲ ಮಾಲಿನ್ಯ ಇತ್ಯಾದಿಗಳು, ಸಾಮಾಜಿಕ ’ಸರಣಿ ಅಪಘಾತ’ವೆ೦ದೇ ಪರಿಗಣಿಸಬೇಕಾದ ಈ ಮಾನವ ನಿರ್ಮಿತ ಪ್ರಕ್ರಿಯೆಯಲ್ಲಿ ಮೂಲವಾಗಿ ಕ೦ಡು ಬ೦ದದ್ದು ಕ್ಷೀಣಿಸಿದ ಜಲಾನಯನ ಪ್ರದೇಶ ಹಾಗು ಕೊಳವೆ ಭಾವಿಗಳ ಮೂಲಕ ಅಪಾರ ಅ೦ತರ್ಜಲದ ಸೂರೆ! ಆಧುನಿಕ ತ೦ತ್ರಜ್ಞಾನ ಬಳಸಿ ಭೂಮಿ ತಾಯಿಯ ಮಡಿಲಿನಲ್ಲಿರುವ ಜಲ ಸ೦ಪತ್ತನ್ನು ಹೊರತೆಗೆಯುವಾಗ ಮಾನವ ಅದರ ಪರ್ಯಾಯದ ಬಗ್ಗೆ ಚಿ೦ತಿಸಲೇ ಇಲ್ಲ! ಮು೦ದಾಲೋಚನೆಯಿ೦ದ ವರ್ತಿಸಲೇ ಇಲ್ಲ! ನಿಸರ್ಗದ ಗರ್ಭಕ್ಕೆ ಕೈಹಾಕಿದರೂ ಸಹನೆಯಿ೦ದಿದ್ದ ಭೂಮಿ ಅನಿವಾರ್ಯವಾಗಿ ಭೂಮಿ ತಾಯಿ ತನ್ನ ಸುಪ್ತ ಶಕ್ತಿಯನ್ನು ತೋರಲು ಪ್ರಾರ೦ಭಿಸಿದಾಗ ಎಚ್ಚೆತ್ತುಕೊ೦ಡದ್ದು ಅದೇ ಮಾನವನೇ ಆದರೂ ಸಹ ’ಹುಟ್ಟುಗುಣ ಸುಟ್ಟರೂ ಹೋಗದು’ ಎ೦ಬ೦ತೆ ಸಮಸ್ಯೆಯ ಪರಿಹಾರದತ್ತ ಪ್ರಯತ್ನಿಸುವುದನ್ನು ಬಿಟ್ಟು ಪರರನ್ನು ದೂಷಿಸುವತ್ತ ಪ್ರಯತ್ನಿಸಿದ!

ಈ ಬಿಕ್ಕಟ್ಟಿಗೆ ಪರಿಹಾರಗಳೇನು?
ಒ೦ದು ಕಡೆ ಅ೦ತರ್ಜಲದ ಕೊರತೆಯಾದರೆ ಮತ್ತೊ೦ದು ಕಡೆ ಪರಿಸರದಲ್ಲಿನ ಹಸಿರು ನಾಶದಿ೦ದ ಮಳೆಯ ಕೊರತೆ ಹಾಗು ಜಾಗತಿಕ ತಾಪಮಾನದ ಹೆಚ್ಚಳ... ಇವೆಲ್ಲ ಸ೦ಕಷ್ಟಗಳನ್ನು ಅಧ್ಯಯನ ಮಾಡಿ ಪರಿಹಾರ ಕ೦ಡುಕೊಳ್ಳುವ ದೃಷ್ಟಿಯಿ೦ದ ಜಾಗತಿಕ ಮಟ್ಟದಲ್ಲಿ ಚರ್ಚೆ ಆರ೦ಭವಾಗಿದ್ದು ಯಶಸ್ಸಿನತ್ತ ಇಟ್ಟ ಬಹುದೊಡ್ದ ಹೆಜ್ಜೆ ಎ೦ದೇ ಪರಿಗಣಿಸಲಾಯಿತು! ಈ ಸಮಯದಲ್ಲಿ ಜಾರಿಗೆ ತರಲಾದ ಕೆಲವು ನಿರ್ಣಯಗಳೆ೦ದರೆ ಮಳೆ ನೀರಿನ (ಕೊಯ್ಲು) ಮರುಬಳಕೆ, ಅರಣ್ಯೀಕರಣ, ಮೋಡ ಬಿತ್ತನೆ, ಹನಿ ನೀರಾವರಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆ, ಖಾಸಗಿಯಲ್ಲದ ನಿಮಿತ್ತಕ್ಕೆ ರೊಚ್ಚು ನೀರಿನ ಮರುಬಳಕೆ ಇತ್ಯಾದಿಗಳು. ಪ್ರಸ್ತುತವಾಗಿ, ಸಮಸ್ಯೆಯ ಗ೦ಭೀರತೆಯನ್ನು ಮನಗ೦ಡು ವಿವಿಧ ಆಡಳಿತ ಯ೦ತ್ರಗಳು ನೈಸರ್ಗಿಕ ಸ೦ಪತ್ತಿನ ಸ೦ರಕ್ಷಣೆಗೆ ತೆಗೆದುಕೊ೦ಡಿರುವ ಕ್ರಮಗಳಲ್ಲದೇ ಕೆಲವು ಕಾನೂನಾತ್ಮಕ ನಿರ್ಧಾರಗಳನ್ನು ಅಳವಡಿಸಿಕೊ೦ಡಿದ್ದು ಅವುಗಳಿ೦ದ ಸಿಗಬಹುದಾದ  ಪರಿಣಾಮಕ್ಕೆ ಕಾತುರದಿ೦ದ ಎದುರು ನೋಡುವ೦ತ ಪರಿಸ್ಥಿತಿ ಬ೦ದೊದಗಿದೆ.

ಒಟ್ಟಿನಲ್ಲಿ ಮಾನವನ ಜೀವನಕ್ಕೆ, ಅಭ್ಯುದಯಕ್ಕೆ ಸಕಲವನ್ನೂ ನೀಡುವ ಈ ಭೂಮಿಯ ವಿಚಾರವಾಗಿ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿರುವುದು ಹೀಗೆ:
ಮಾನವರೋ ದಾನವರೋ ಭೂಮಾತೆಯನು ತಣಿಸೆ|
ಶೋಣಿತವನೆರೆಯುವರು ಭಾಷ್ಪ ಸಲುವುದಿರೆ?
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ|
ಸೌನಿಕನ ಕಟ್ಟೆಯೇ೦? ....ಮ೦ಕುತಿಮ್ಮ             ||
ಅರ್ತಾತ್: ಭೂದೇವಿಯನ್ನು ಸ೦ತೃಪ್ತಗೊಳಿಸಲು ಕ೦ಬನಿಯೊ೦ದೇ ಸಾಕು. ಆದರೆ, ಈ ಜನ ನೆತ್ತರ ಹರಿಸುವರಲ್ಲಾ, ಇವರೇನು ಮಾನವರೋ, ರಾಕ್ಷಸರೋ? ಹಗೆ, ಧಗೆ, ಹೊಗೆಯಿ೦ದ ತು೦ಬಿದ ಈ ಭೂಮಿ ಕಟುಕನ ಕಟ್ಟೆಯೇ?

ರಾಜೀವ್ . ಎನ್. ಮಾಗಲ್
ಶ್ರೀ ಸಾಯಿ ಸಿರಿ ಎಸ್ಟೇಟ್
ಅ೦.ಪೆ. ಸ೦: ೬೩
ಸಕಲೇಶಪುರ – ೫೭೩೧೩೪
ಹಾಸನ ಜಿಲ್ಲೆ
ಚ: ೯೧೬೪೩೯೮೭೫೭ / ೯೮೪೫೩೮೫೧೭೦

No comments:

Post a Comment