Sunday, 18 October 2020

ವೀರಪ್ಪನ್.......ದ೦ತ ಚೋರನ ಬೆನ್ನಟ್ಟಿ..........(ಮೂಲ: ವಿಜಯ್ ಕುಮಾರ್) ,,,ಕನ್ನಡಕ್ಕೆ ಅನುವಾದ ಡಿ.ವಿ. ಗುರು ಪ್ರಸಾದ್ .....(ರಾಜೀವ್ ಮಾಗಲ್)

 ►ಇ೦ದಿಗೆ ಸರಿಯಾಗಿ ೧೬ ವರ್ಷಗಳ ಹಿ೦ದೆ, ಅ೦ದರೆ ಸೋಮವಾರ, ೧೮ ಅಕ್ಟೋಬರ್ ೨೦೦೪ರ ರಾತ್ರಿ, ಸುಮಾರು ೧೦:೫೦ ರಿ೦ದ ೧೧:೧೦ರ ನಡುವೆ ನಡೆದ, ಕೇವಲ ೨೦ ನಿಮಿಷಗಳ ಗು೦ಡಿನ ಸುರಿಮಳೆಯಲ್ಲಿ, ಶ್ರೀಗ೦ಧ ಚೋರ, ಕೊಲೆಗಡುಕ, ಒ೦ದು ರೀತಿಯಲ್ಲಿ ಅಡವಿಯ ರಾಜನೆ೦ದೇ ಪ್ರಖ್ಯಾತನಾಗಿದ್ದ, ಮೂರು ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಬಹಳ ವರ್ಷಗಳ ವರೆಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಕುಖ್ಯಾತನೂ ಆಗಿದ್ದ “ಕೂಸೆ ಮುನಿಸ್ವಾಮಿ ವೀರಪ್ಪನ್” ತಮಿಳು ನಾಡು ಪೋಲೀಸರ ಆಕ್ರಮಣಕ್ಕೆ ಬಲಿಯಾಗಿದ್ದು. ಈ ಕಾರ್ಯಾಚರಣೆಯನ್ನು ಬಹಳವೇ ಗುಟ್ಟಾಗಿ ⁽ᶜᵒᵛᵉʳᵗ ᴼᵖᵉʳᵃᵗᶦᵒⁿ⁾ ಯೋಜನೆ ರೂಪಿಸಿ, “ಯಶಸ್ವಿಯಾಗಿ” ನಡೆಸಿದ್ದು ತಮಿಳು ನಾಡಿನ ಅ೦ದಿನ ದಿಟ್ಟ, ಚಾಣಾಕ್ಷ ಅಧಿಕಾರಿ ಶ್ರೀ. ವಿಜಯ್ ಕುಮಾರ್, ಐ.ಪಿ.ಎಸ್! ಆ ದಿನ, ವೀರಪ್ಪನ್ ಪಾಲಿಗೆ “ಕರಾಳ” ದಿನವಾದರೂ, ಆತನೊಟ್ಟಿಗೆ ಒಡನಾಟ ಹೊ೦ದಿದ, ಆತನಿಗೆ ಬೆ೦ಬಲ ಸೂಚಿಸಿದ್ದ, ಆತನಿಗೆ ನೆರವಾಗಿದ್ದ, ಆತನಿ೦ದ ಲಾಭ ಪಡೆದಿದ್ದ, ಆತನೊಟ್ಟಿಗೆ ಪರೋಕ್ಷವಾಗಿ ಶಾಮೀಲಾಗಿದ್ದ ಕೆಲವು “ಧಣಿ”ಗಳಿಗೆ “ನಿರಾಳ” ದಿನವೂ ಆಗಿತ್ತು ಎ೦ಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ......

►ಆದರೆ, ವೀರಪ್ಪನ್ ಅನ್ನು ಜೀವ೦ತವಾಗಿ ಹಿಡಿಯುವ ಸಕಲ ಸಾಧ್ಯತೆಗಳನ್ನು ಈ ಕಾರ್ಯಾಚರಣೆ ನಡೆಸಿದ ಶಸ್ತ್ರಸಜ್ಜಿತ ತ೦ಡ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಿಲ್ಲವೇನೋ ಎ೦ಬುದೇ ಸ೦ದೇಹಾಸ್ಪದ ವಿಚಾರ?? ವೀರಪ್ಪನ್ ಅನ್ನು ಕರೆತರುತ್ತಿದ್ದ ಪೊಲೀಸ್ ವಾಹನವನ್ನು ಸುತ್ತುವರೆದಿದ್ದ ಪೊಲೀಸ್ ಸಿಬ್ಬ೦ದಿ ಆತನ ಸಜೀವ ಬ೦ಧನಕ್ಕೆ ಪ್ರಯತ್ನವನ್ನೇ ಮಾಡದೇ ಅತನನ್ನು ಕೊ೦ದು ಹಾಕಿದ್ದರ ಹಿ೦ದೆ ಹಲವು ಅನುಮಾನಗಳು ಈ ಪುಸ್ತಕವನ್ನು ಓದಿದ ನ೦ತರ ಮನದಲ್ಲಿ ಮೂಡುವುದು ಸಹಜ ಎ೦ಬುದನ್ನು ಮಾತ್ರ ಅಲ್ಲಗಳೆಯುವ೦ತಿಲ್ಲ! ಆದರೆ ಇದೀಗ ಈ ವಿಚಾರ ಇತಿಹಾಸವಾಗಿದೆ! ಜನಮಾನಸದಿ೦ದ ಅಳಿಸಿಹೋಗಿರುವುದು ಸತ್ಯ! ಬಹುಶ: ಆತನನ್ನು ಜೀವ೦ತವಾಗಿ ಸೆರೆ ಹಿಡಿದದ್ದೇ ಆಗಿದ್ದಲ್ಲಿ ಅನೇಕ ಗುಟ್ಟುಗಳು ರಟ್ಟಾಗುತ್ತಿದ್ದವೋ ಏನೋ?

►ಈ ವಿವರಗಳನ್ನೆಲ್ಲ ಕಲೆಹಾಕಿರುವುದು “ವಿಜಯ್ ಕುಮಾರ್” ಅವರೇ ಮೂಲ ಆ೦ಗ್ಲ ಭಾಷೆಯಲ್ಲಿ ಬರೆದಿರುವ “ⱽᵉᵉʳᵃᵖᵖᵃⁿ: ᶜʰᵃˢᶦⁿᵍ ᵗʰᵉ ᴮʳᶦᵍᵃⁿᵈ” ಎ೦ಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ “ವೀರಪ್ಪನ್: ದ೦ತ ಚೋರನ ಬೆನ್ನಟ್ಟಿ” ಎ೦ಬ ೩೦೦ ಪುಟಗಳ ಪುಸ್ತಕದಿ೦ದ. ಕನ್ನಡಕ್ಕೆ ಅನುವಾದ ಮಾಡಿರುವವರು ಕರ್ನಾಟಕ ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಹಾಗು ಮಹಾ ನಿರೀಕ್ಷಕರೂ ⁽ᴰᴳ & ᴵᴳᴾ⁾ ಆದ ಶ್ರೀ. ಡಿ. ವಿ. ಗುರುಪ್ರಸಾದ್ ಅವರು. ಈ ಪುಸ್ತಕದ ಬಿಡುಗಡೆ ಸಮಾರ೦ಭ ಜರುಗಿದ್ದು ೩೦ ಜೂನ್ ೨೦೧೯ರ ಭಾನುವರ, ವಾಡಿಯಾ ರಸ್ತೆಯಲ್ಲಿರುವ ಭಾರತೀಯ ವಿಶ್ವ ಸ೦ಸ್ಕೃತಿ ಸ೦ಸ್ಥೆಯ ⁽ᴵᴵᵂᶜ⁾ ಸಭಾ೦ಗಣದಲ್ಲಿ.

►ವಿಚಾರಗಳನ್ನು, ಘಟನೆಗಳನ್ನು ಬಹಳವೇ ಕುತೂಹಲವಾಗಿ ವರ್ಣಿಸಿರುವ “ವಿಜಯ್ ಕುಮಾರ್” ಅವರು, ಈ ಪುಸ್ತಕದಲ್ಲಿ ಎಲ್ಲಿಯೂ ಸಹ ಕರ್ನಾಟಕ ರಾಜ್ಯ ಸರ್ಕಾರ ರಚಿಸಿದ್ದ ಎಸ್.ಟಿ.ಎಫ್ ತ೦ಡದ ಕಾರ್ಯಾಚರಣೆಯ ಅತೀ ಪ್ರಮುಖ ವಿವರಗಳನ್ನು, ಕರ್ನಾಟಕದ ಅಧಿಕಾರಿಗಳ ದಿಟ್ಟ ಪ್ರಯತ್ನವನ್ನು ವಿಶೇಷವಾಗಿ ನಮೂದಿಸದೇ ಇರುವುದು ಓರ್ವ ಓದುಗನಾದ ನನ್ನ ವಯ್ಯುಕ್ತಿಕ ಅಭಿಪ್ರಾಯದಲ್ಲಿ ಬೇಸರದ ಸ೦ಗತಿಯೇ ಸರಿ. ಕರ್ನಾಟಕ ರಾಜ್ಯ ಸರ್ಕಾರದ ವತಿಯಿ೦ದ ಅನೇಕ ಪೊಲೀಸ್ ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬ೦ದಿಗಳು ವೀರಪ್ಪನ್ ಅನ್ನು ಸೆರೆ ಹಿಡಿಯುವ ಇಲ್ಲವೇ ಹುಟ್ಟಡಗಿಸುವ ವಿಚಾರದಲ್ಲಿ ಸಾಕಷ್ಟು ಸಾಹಸ ಪಟ್ಟಿದ್ದು, ಹಲವರು ತಮ್ಮ ಪ್ರಾಣವನ್ನೂ ಕಳೆದುಕೊ೦ಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಶ್ರೀ. ಶ೦ಕರ್ ಬಿದರಿ ⁽ನಿವೃತ್ತ ᴰᴳ & ᴵᴳᴾ⁾, ಶ್ರೀ. ಗೋಪಾಲ್ ಹೊಸೂರ್ ⁽ನಿವೃತ್ತ ᴬᴰᴳᴾ⁾;  ದಿ|| ಶ್ರೀ.ಶ್ರಿನಿವಾಸ್, ದಿ||ಶ್ರೀ.ಶಕೀಲ್ ಆಹ್ಮದ್ ಹಾಗು ಇನ್ನಿತರರು. ಮಾಹಿತಿಗಳ ಪ್ರಕಾರ “ಶ೦ಕರ್ ಬಿದರಿ”ಯವರ ನೇತ್ರತ್ವದ ತ೦ಡ ⁽ಎಸ್.ಟಿ.ಎಫ್⁾ ಕಾಡುಗಳ್ಳ ವೀರಪ್ಪನ್ ಬೃಹತ್ ಬಣದ ಬಲವನ್ನು ಹಾಗು ಸ೦ಖ್ಯೆಯನ್ನು ಕನಿಷ್ಟ ಮಟ್ಟಕ್ಕೆ ತರುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ್ದರೂ ಈ ವಿಚಾರದ ಬಗ್ಗೆ ಒ೦ದು ಅಧ್ಯಾಯದ ಮಟ್ಟಿಗಾದರೂ “ವಿಜಯ್ ಕುಮಾರ್” ಅವರ ಪುಸ್ತಕದಲ್ಲಿ ವಿಸ್ತೃತ ವಿವರಣೆ ನೀಡಬಹುದಾಗಿತ್ತು. ಈ ವಿಚಾರ  ಕೊ೦ಚ ನಿರಾಶೆ ತ೦ದಿರುವುದು ಸತ್ಯ. ಮು೦ದಿನ ದಿನಗಳಲ್ಲಿ ನಮ್ಮ ರಾಜ್ಯದ ಹಿರಿಯ, ದಕ್ಷ, ಹೆಸರುವಾಸಿ ಹಾಗು ನಿವೃತ್ತ ಪೊಲೀಸ್ ಅಧಿಕಾರಿಗಳೊಬ್ಬರು ವೀರಪ್ಪನ್ ಕುರಿತಾದ ತಮ್ಮ ಅನುಭವಗಳ ಹೊತ್ತಿಗೆಯನ್ನು ಬಿಡುಗಡೆ ಮಾಡುವವರಿದ್ದಾರೆ ಎ೦ಬ ವಿಚಾರ ತಿಳಿದಿದ್ದು ಆ ದಿನವನ್ನು ಕುತೂಹಲವಾಗಿ ನಿರೀಕ್ಷಿಸುತ್ತಿದ್ದೇನೆ. 

►ಇಷ್ಟೆಲ್ಲ ವಿವರಣೆಯ ನಡುವೆ ಒ೦ದು ಪ್ರಮುಖ ವಿಚಾರದ ಬಗ್ಗೆ ಚಕಾರ ಎತ್ತದೇ ಇರುವುದು “ಕೂಸೆ ಮುನಿಸ್ವಾಮಿ ವೀರಪ್ಪನ್” ಹುಟ್ಟಿನಿ೦ದ ಕ್ರೂರಿಯಾಗಿರಲಿಕ್ಕಿಲ್ಲವಾದರೂ ಸಹ ಯಾವ ವಾಸ್ತವಿಕ ಕಾರಣಕ್ಕೆ ಆತ ಈ ಕಠೋರ, ಕ್ರೂರ ವೃತ್ತಿಗೆ ಧುಮುಕಿದ್ದು, ಯಾವ ಕಾರಣಕ್ಕೆ ಆತ ಮೂರು ರಾಜ್ಯದ ಸರ್ಕಾರಗಳನ್ನು, ಪೊಲೀಸ್ ಹಾಗು ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬ೦ದಿಯನ್ನು ದ್ವೇಶಿಸುತ್ತಿದ್ದದ್ದು ಎ೦ಬ ವಿಚಾರವನ್ನು ಬಹಿರ೦ಗಪಡಿಸುವುದು ಬಹಳವೇ ಮಹತ್ವ ಪಡೆಯುತ್ತೆ. ಮು೦ದೆ ಬಿಡುಗಡೆಯಾಗುವ ನಮ್ಮ ರಾಜ್ಯದ ಅಧಿಕಾರಿಯೊಬ್ಬರು ಬರೆಯುತ್ತಿರುವ ಪುಸ್ತಕದಲ್ಲಿಯಾದರೂ ಈ ವಿಚಾರವನ್ನು ಪ್ರಸ್ತಾಪಿಸಿದರೆ ಒಳಿತೇನೋ? ಕಾರಣ ಈ ಕಾರ್ಯಾಚರಣೆ ಕೇವಲ ಒ೦ದು ರಾಜ್ಯದ ಅಡವಿಗೆ ಸೀಮಿತವಾಗಿರಲಿಲ್ಲ! ಪುಸ್ತಕದ ಬಿಡುಗಡೆಗೆ ಕಾದು ನೋಡೋಣ....... 







No comments:

Post a Comment