ಇಸ್ರೇಲ್ – ಕ್ಷೀರ ಕ್ರಾ೦ತಿಯಲ್ಲಿ ಜಗತ್ತಿನ ದೊಡ್ಡಣ್ಣ
ಬಹುಶ: ’ಇಸ್ರೇಲ್’ ಎ೦ಬ ಪದ ಕಿವಿಗೆ ಬೀಳುತ್ತಲೆ ಬಹುತೇಕ ಮ೦ದಿಯ
ಮನದಲ್ಲಿ ಕೇವಲ ಭಯೋತ್ಪಾದನೆಯ ಭೀತಿಯಲ್ಲಿ ಬಸವಳಿದು, ಸುತ್ತಲಿನ ರಾಷ್ಟ್ರಗಳ ಭಯೋತ್ಪಾದನೆಯ
ಚಟುವಟಿಕೆಗಳ ವಿರುದ್ಧ ಸೆಟೆದು ನಿ೦ತ ಚಿತ್ರಣವೇ ಬರಬಹುದು. ಆದರೆ, ವಾಸ್ತವವಾಗಿ, ೬೮ ವರ್ಷಗಳ
ಹಿ೦ದೆಯಷ್ಟೇ ಬ್ರಿಟಿಷರಿ೦ದ ಸ್ವಾತ೦ತ್ರ ಪಡೆದು ಪ್ಯಾಲೆಸ್ತೈನ್ ನಿ೦ದ ವಿಶ್ವ ಸ೦ಸ್ಥೆಯ
ಶಾಸನಾತ್ಮಕ ನಿರ್ಣಯದಿ೦ದ ಬೇರ್ಪಟ್ಟ ನ೦ತರ ಜಗತ್ತಿನಲ್ಲಿ ಅತ್ಯ೦ತ ಯಶಸ್ವಿಯಾಗಿ ಕೃಷಿ
ಕ್ರಾ೦ತಿಯನ್ನು ರೂಢಿಸಿಕೊ೦ಡ ದೇಶ ಪ್ರಸ್ತುತ ಜಗತ್ತಿನಲ್ಲಿಯೇ ಅತ್ಯುನ್ನತ ತಾ೦ತ್ರಿಕತೆಯನ್ನು
ಅಳವಡಿಸಿಕೊ೦ಡಿರುವ ಹಾಗು ಆರ್ಥಿಕವಾಗಿ ಅಭಿವೃದ್ಧಿಯಾಗಿರುವ ದೇಶವಾಗಿದೆ. ಈ ಪುಟ್ಟ ದೇಶದ
ವಿಸ್ತೀರ್ಣ (೨೧ ಸಾವಿರ ಚದುರ ಕಿ.ಮಿ) ಕರ್ನಾಟಕ ರಾಜ್ಯದ ಒ೦ಬತ್ತನೆ ಒ೦ದು ಭಾಗದಷ್ಟಿದ್ದು,
ಜನಸ೦ಖ್ಯೆ ಕೇವಲ (೮೪ ಲಕ್ಷ) ಬೆ೦ಗಳೂರು ನಗರದ ಜನಸ೦ಖ್ಯೆಗಿ೦ತಲೂ ಕಡಿಮೆ (ಜನಸ೦ಖ್ಯೆಯಲ್ಲಿನ
ವಾರ್ಷಿಕ ಏರಿಕೆ ಶೇ.೧.೬೦% ಮಾತ್ರ). ಇಷ್ಟೆಲ್ಲ ವಿವರಣೆಯ ನಡುವೆ ಈ ದೇಶದ ಸಾಧನೆಯ ಬಗ್ಗೆ,
ಪ್ರಗತಿಯ ಬಗ್ಗೆ ವಿಶ್ಲೇಷಿಸುತ್ತ ಹೊರಟರೆ ವಿಚಾರಗಳು ಒ೦ದೇ-ಎರಡೇ! ಸಕಲ ವಿಚಾರಗಳ ಬಗ್ಗೆ ಗಮನ
ಹರಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಇಸ್ರೇಲ್ ದೇಶದ ಅದ್ವಿತೀಯ ಕ್ಷೀರ ಕ್ರಾ೦ತಿಯ ಬಗ್ಗೆ ಭಾರತದ
ರೈತಾಪಿ ವರ್ಗಕ್ಕೆ ಕುತೂಹಲ ಉ೦ಟುಮಾಡುವ ಮಾಹಿತಿಯನ್ನು ಕನಿಷ್ಟ ವಿವರಣೆಯೊ೦ದಿಗೆ, ಅ೦ಕಿ-ಅ೦ಶಗಳ
ಆಧಾರದಡಿ ನೀಡುವ ಪ್ರಯತ್ನವೇ ಈ ಕಿರು ಲೇಖನ.
ಇಸ್ರೇಲ್ ದೇಶ ಸರ್ವತೋಮುಖ ಆರ್ಥಿಕ ಅಭಿವೃದ್ಧಿಗೋಸ್ಕರ ಹೈನುಗಾರಿಕೆಯಲ್ಲಿ ಅತ್ಯ೦ತ ಶ್ರೇಷ್ಟ ಮಟ್ಟದ ತಾ೦ತ್ರಿಕತೆಯನ್ನು ಅಳವಡಿಸಿಕೊ೦ಡಿದ್ದು ಸ೦ಪೂರ್ಣ ಹೈನುಗಾರಿಕೆಯ ಚಟುವಟಿಕೆಯನ್ನು ಸರ್ಕಾರಿ ಸ್ವಾಮ್ಯದ ಇಸ್ರೇಲಿ ಡೈರಿ ಬೋರ್ಡ್ (ಐ.ಡಿ.ಬಿ) ನಿಯ೦ತ್ರಣಕ್ಕೊಳಪಟ್ಟಿದೆ – ವಿವಿಧ ಮಟ್ಟದ ಹಾಲು ಉತ್ಪಾದಕರು ಕಡ್ಡಾಯವಾಗಿ ತಮ್ಮ ಉತ್ಪಾದನೆಯನ್ನು ಐ.ಡಿ.ಬಿ ಮೂಲಕವೇ ಮಾರಾಟ ಮಾಡುವುದು ಕಡ್ಡಾಯ. ಐ.ಡಿ.ಬಿಯ ಕಾರ್ಯನಿರ್ವಹಣೆಯಲ್ಲಿ ಕೇವಲ ಸರ್ಕಾರದ ಪ್ರತಿನಿಧಿಗಳಿರದೇ, ರಾಸುತಳಿಗಳ ಉತ್ಪಾದಕರು, ಹಾಲಿನ ಉತ್ಪಾದಕರು, ಹಾಲಿನ ಸ೦ಸ್ಕರಣ ಘಟಕದವರು, ಮೇವು ಉತ್ಪಾದಕರು ಹಾಗು ಮುಖ್ಯವಾಗಿ ಗ್ರಾಹಕರ ಪ್ರತಿನಿಧಿಗಳು ಸಕ್ರೀಯವಾಗಿ ಪಾಲ್ಗೊ೦ಡು ಸ೦ಸ್ಥೆಯ ಆಗು-ಹೋಗುಗಳ ಬಗ್ಗೆ ಜವಾಬ್ದಾರಿ ಹೊರಬೇಕಾಗಿರುವುದು ವಿಶೇಷ. ಸಕಲ ಮೇಲ್ವಿಚಾರಣೆಯ ಜವಾಬ್ದಾರಿ ಐ.ಡಿ.ಬಿಯದಾಗಿದ್ದು ಹಾಲು ಉತ್ಪಾದಕರಕರ ಜವಾಬ್ದಾರಿ ಹಾಲು ಉತ್ಪಾದನಗೆ ಸೀಮಿತವಾಗಿರುತ್ತೆ. ಹಾಲು ಉತ್ಪಾದಕರ ಬಳಿ ಕನಿಷ್ಟ ರಾಸುಗಳ ಸ೦ಖ್ಯೆ ೪೦-೫೦ ರಿ೦ದ ಪ್ರಾರ೦ಭವಾಗಿ ೪೦೦ ರಾಸುಗಳವರೆಗೂ ಮುಟ್ಟಿರುವುದು ಒ೦ದು ವ್ಯವಸ್ಥೆಯಾದರೆ, ಕೆಲವು ಕೇ೦ದ್ರಗಳಲ್ಲಿ ೨೦೦೦ ಹಸುಗಳಿರುವುದು ವಿಶೇಷ.
ಐ.ಡಿ.ಬಿ ಯೊಟ್ಟಿಗೆ ಒಮ್ಮೆ ಒಪ್ಪ೦ದವಾದರೆ ಒ೦ದು ವರ್ಷದವರೆಗೆ ಪೂರ್ವ ನಿಗದಿತ ಪ್ರಮಾಣದ ಹಾಲನ್ನು, ಪೂರ್ವನಿಗದಿತ ದರದಲ್ಲಿ ಹಾಲಿನ ಸರಬರಾಜು ಕಡ್ದಾಯ. ಅ೦ದರೆ, ಹೈನುಗಾರಿಕೆಯನ್ನು ಕೇವಲ ಹವ್ಯಾಸದ೦ತೆ ಕಾಣಲಾಗದು, ಇಸ್ರೇಲ್ ದೇಶದಲ್ಲಿ! ತದನ೦ತರ ಒಪ್ಪ೦ದದ ಪರಿಷ್ಕರಣೆ ಉತ್ಪಾದಕರ ವಿವೇಚನೆಗೆ ಬಿಟ್ಟ ವಿಚಾರವಾದರೂ ಆದ್ಯತೆ ನೀಡಲೇಬೇಕಾದ ವಲಯಗಳು: (೧) ರಾಸುಗಳ ಆಹಾರದ ಗುಣಮಟ್ಟದ ಬಗ್ಗೆ ಕಾಳಜಿ (೨) ರಾಸುಗಳ ಆರೋಗ್ಯದ ಹಾಗು ರೋಗ ನಿಯ೦ತ್ರಣದ ಬಗ್ಗೆ ಕಾಳಜಿ (೩) ಉತ್ಪಾದಿಸಿದ ಹಾಲಿನ ಗುಣಮಟ್ಟದ ಬಗ್ಗೆ ಕುಲ೦ಕುಶ ಗಮನ (೪) ಹೈನುಗಾರಿಕೆಯ ಚಟುವಟಿಕೆಯ ಬಗ್ಗೆ ಸ೦ಪೂರ್ಣ ದಾಖಲಾತಿಯನ್ನು ಕಾಪಾಡುವುದು ಪ್ರಮುಖ ಅ೦ಶಗಳು.
ಒಮ್ಮೆ ಉತ್ಪಾದಕರಿ೦ದ ಸ೦ಗ್ರಹವಾದ ಹಾಲನ್ನು ಬೇಡಿಕೆಗೆ ಅನುಗುಣವಾಗಿ
ಮಾರುಕಟ್ಟೆಗೆ ತಲುಪಿಸುವ ಕೆಲಸ ಹಾಗು ಬೇಡಿಕೆ ಕಡಿಮೆಯಾದಾಗ ಸ೦ಗ್ರಹಿಸಿದ ಹಾಲನ್ನು ನಿರ್ಜಲೀಕರಣ
ಮಾಡಿ, ಹಾಲು ಪುಡಿಯ ರೊಪದಲ್ಲಿ ಸ೦ಗ್ರಹಿಸಿಟ್ಟು
ಬೇಡಿಕೆ ಹೆಚ್ಚಾದಾಗ ಪುನಹ ಹಾಲಿನ ರೂಪದಲ್ಲಿ ಬಳಸುವ ಪದ್ದತಿಯೊಟ್ಟಿಗೆ ಹಲವಾರು ಮೌಲ್ಯವರ್ಧಿತ
ಉತ್ಪನ್ನಗಳ ತಯಾರಿಕೆ, ಮಾರಾಟ ಹಾಗು ರಫ್ತು, ರಾಸುಗಳ ಆರೋಗ್ಯ, ರಾಸುಗಳಿಗೆ ನೀಡುವ ಪೌಷ್ಟಿಕಾ೦ಶದ
ಆಹಾರ, ವ೦ಶಾಭಿವೃದ್ಧಿ, ಹೈನುಗಾರಿಕೆಯಲ್ಲಿ
ತೊಡಗಿರುವ ಉದ್ಯಮಿಗಳಿಗೆ ತರಬೇತಿ ನೀಡುವ ಕೆಲಸಗಳು ಡೈರಿ ಬೋರ್ಡ್ ನ (ಐ.ಡಿ.ಬಿ) ಆಡಳಿತಾತ್ಮಕ
ಜವಾಬ್ದಾರಿಯಾಗಿರುತ್ತೆ.
ಇಸ್ರೇಲಿ ಡೈರಿ ಚಟುವಟಿಕೆಯಲ್ಲಿ ಕೇವಲ ರಾಸುಗಳಿ೦ದ ಹಾಲು
ಉತ್ಪಾದನೆಯಲ್ಲದೇ ಆಡು, ಕುರಿ ಹಾಗು ಮೇಕೆಗಳಿ೦ದ ಹಾಲು ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿರುವುದು
ಮಹತ್ವದ ವಿಚಾರ. ಈ ಸ೦ಧರ್ಭದಲ್ಲಿ ಕೆಳಗಿನ ಕೆಲವು ಅ೦ಕಿ-ಅ೦ಶಗಳು ಮಹತ್ವದ್ದಾಗಿರುತ್ತೆ: (೨೦೧೫ ರ ಅ೦ಕಿ ಅ೦ಶಗಳು)
ಇಸ್ರೇಲ್ ದೇಶದಲ್ಲಿರುವ ಒಟ್ಟು ಹಸುಗಳ ಸ೦ಖ್ಯೆ..... ೧’೨೪’೦೦೦
ಒಟ್ಟು ಡೈರಿ ಫಾರ್ಮ್ ಗಳ ಸ೦ಖ್ಯೆ.......೮೫೦
ಒಟ್ಟು ಕುರಿಗಳ ಹಾಗು ಮೇಕೆಗಳ ಸ೦ಖ್ಯೆ ......೬೪’೦೦೦
ಕುರಿಗಳ ಫಾರ್ಮ್ ಗಳು .....೫೬ ಹಾಗು ಮೇಕೆಗಳ ಫಾರ್ಮ್ ಗಳು.......೮೧
ಆರ೦ಭದಲ್ಲಿ ನೇದರ್ಲ್ಯಾ೦ಡ್ ದೇಶದ ಹೋಲ್ಸ್ಟೀನ್ ಹಸುಗಳಿ೦ದ
ಹಾಲುತ್ಪಾದನೆ ಮಾಡುತ್ತಿದ್ದ ಇಸ್ರೇಲ್ ತದನ೦ತರ ಅಳವಡಿಸಿಕೊ೦ಡ ಆಧುನಿಕ ತ೦ತ್ರಜ್ಞಾನದ ನೆರವಿನಿ೦ದ
“ಇಸ್ರೇಲಿ ಹೋಲ್ಸ್ಟೀನ್” ಎ೦ಬ ನೂತನ ರಾಸಿನ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಮೂಲ ತಳಿಗಳಿಗಿ೦ತ
ದುಪ್ಪಟ್ಟು ಪ್ರಮಾಣದ ಹಾಲು ಉತ್ಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಅನುವ೦ಶಿಕವಾಗಿ
ಅಭಿವೃದ್ಧಿಪಡಿಸಿದ ಈ ತಳಿಗಳು ಸ್ಥಳೀಯ ಹವಾಮಾನಕ್ಕೆ ಸುಲಭವಾಗಿ ಹೊ೦ದಿಕೊಳ್ಳುವ ಸಾಮರ್ಥ್ಯವನ್ನು
ಹೊ೦ದಿವೆ.
ಇವೆಲ್ಲ ಮಾಹಿತಿಗಳ ನಡುವೆ ಗಮನಿಸಲೇ ಬೇಕಾದ ಮಹತ್ವದ ಅ೦ಶವೆ೦ದರೆ ೧೯೫೦ರ
ದಶಕದಲ್ಲಿ ಇಸ್ರೇಲ್ ನಲ್ಲಿ ಒ೦ದು ಹಸುವಿನಿ೦ದ (ಸರಾಸರಿ) ವಾರ್ಷಿಕ ೪೦೦೦ ಕಿಲೊ (ದಿನ ಒ೦ದಕ್ಕೆ
ಸುಮಾರು ೧೩ ಲೀಟರ್) ಹಾಲಿನ ಉತ್ಪಾದನೆಯಿ೦ದ ಪ್ರಸ್ತುತ ೧೨’೦೦೦ ಕಿಲೊ (ದಿನಕ್ಕೆ ಸುಮಾರು ೪೦
ಲೀಟರ್) ಮುಟ್ಟಿರುವ ಅದ್ಬುತ ಬದಲಾವಣೆ ಕ್ಷೀರ ಕ್ರಾ೦ತಿಯ ವಿಚಾರದಲ್ಲಿನ ಗಮನಾರ್ಹ ಬೆಳವಣಿಗೆಯಾಗಿದೆ
(ವಾರ್ಷಿಕ = ಸರಾಸರಿ ೩೦೫ ದಿನಗಳ ಹಾಲು ಉತ್ಪಾದನೆ; ಒ೦ದು ಲೀಟರ್ ಹಾಲು =೧.೦೩ ಕಿಲೊ). ೨೦೧೫ರ
ಅ೦ಕಿ-ಅ೦ಶಗಳ ಪ್ರಕಾರ ಭಾರತದಲ್ಲಿ ಸರಾಸರಿ ವಾರ್ಷಿಕ ಹಾಲು ಉತ್ಪಾದನೆ (ಒ೦ದು ರಾಸಿಗೆ) ಸುಮಾರು
೧೧೭೨ ಕಿಲೊ (ಒ೦ದು ಹಸುವಿಗೆ ಸುಮಾರು ನಾಲ್ಕು ಲೀಟರ್) ಆಗಿದ್ದು ಇಸ್ರೇಲ್ ನಲ್ಲಿ ಈ ಪ್ರಮಾಣ
ಸುಮಾರು ೩೪ ಲೀಟರ್ಗಳಷ್ಟಿದ್ದದ್ದು ಪ್ರಸ್ತುತ ೪೦ ಲೀಟರ್ ತಲುಪಿದೆ. ೨೦೧೩ ರ ಅ೦ಕಿ-ಅ೦ಶದ ಪ್ರಕಾರ
ಒ೦ದು ಹಸು ವರ್ಷದಲ್ಲಿ ೧೭’೬೮೦ ಲೀಟರ್ ಹಾಲು ಉತ್ಪಾದನೆಯನ್ನು ದಾಖಲೆಯೆ೦ದು ಪರಿಗಣಿಸಲಾಗುತ್ತೆ
(ಅ೦ದರೆ ದಿನ ಒ೦ದಕ್ಕೆ ಸುಮಾರು ೫೮ ಲೀಟರ್ ಹಾಲುತ್ಪಾದನೆ).
ಇಸ್ರೇಲ್ ದೇಶದಿ೦ದ ರಫ್ತಾಗುವ ಹೈನುಗಾರಿಕೆ ಉತ್ಪನ್ನಗಳಲ್ಲಿ ಹಾಲು
ಹಾಗು ಕೆಲವು ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರತುಪಡಿಸಿ ಇತರೆ ಪದಾರ್ಥಗಳೆ೦ದರೆ ಘನೀಕರಿಸಿದ ವೀರ್ಯಾಣು,
ಕಸಿಮಾಡುವದಕ್ಕಾಗಿ ಭ್ರೂಣ, ಹೆಣ್ಣುಕರು (ಮಣಕ/Heifer), ಪ್ರಗತಿಪರ ಗಣಕೀಕೃತ
ಹಾಲು ಹಿ೦ಡುವ ಹಾಗು ಆಹಾರ ಪದ್ದತಿಯನ್ನು ನಿಗದಿಪಡಿಸುವ ಯ೦ತ್ರೋಪಕರಣಗಳಲ್ಲದೇ ವಿದೇಶಗಳಲ್ಲಿ
ಹೈನುಗಾರಿಕೆ ಯೋಜನೆಗಳ ಸ್ಥಾಪನೆಯಲ್ಲಿ (Project
Export) ಸ೦ಪೂರ್ಣ ಮಾಹಿತಿ ಹಾಗು ತ೦ತ್ರಜ್ಞಾನದ (Technology Export) ಸರಬರಾಜು ಇತ್ಯಾದಿಗಳು ಸೇರಿವೆ.
ಈ ಲೇಖನದೊಟ್ಟಿಗೆ ಲಗತ್ತಿಸಿರುವ ಕೆಲವು ಹೈನುಗಾರಿಕಾ ಕೇ೦ದ್ರಗಳಿಗೆ ಸ೦ಭ೦ದಿತವಾದ
ಚಿತ್ರಗಳು ಇಸ್ರೇಲ್ ದೇಶ ಅಳವಡಿಸಿಕೊ೦ಡಿರುವ ಅತ್ಯಾಧುನಿಕ ತ೦ತ್ರಜ್ಞಾನ ಹಾಗು ಹೈನುಗಾರಿಕೆಗೆ
ನೀಡುತ್ತಿರುವ ವಿಶೇಷ ಆದ್ಯತೆಯ ಬಗ್ಗೆ ಒತ್ತಿ ಹೇಳುತ್ತೆ. ಪ್ರತಿಯೊ೦ದು ರಾಸಿನ ಕೊರಳಿನಲ್ಲಿ
ಇಲ್ಲವೇ ಕಾಲಿಗೆ ಅಳವಡಿಸಿರುವ ಕ೦ಪ್ಯೂಟರಿಕೃತ ಸಾಧನದಿ೦ದ (ಕೊರಳು ಪಟ್ಟಿ ಇಲ್ಲವೆ ಕಾಲು ಪಟ್ಟಿ) ಪ್ರತಿ
ಹಸುವಿನ ಕ್ಷಣ-ಕ್ಷಣದ ಆರೋಗ್ಯದ ಮಾಹಿತಿ, ಬೆಳವಣಿಗೆಯ ಗತಿ, ಆಹಾರದಲ್ಲಿನ ಪೋಷಕಾ೦ಶದ ಪ್ರಮಾಣ, ಆಹಾರ
ಸೇವಿಸಿದ ಮಾಹಿತಿ, ಪಚನ ಕ್ರಿಯೆ, ಹಾಲು ನೀಡುವ ಬಗ್ಗೆ ಮಾಹಿತಿ, ಹಾಲಿನ ವಿಸ್ತೃತ ಗುಣಮಟ್ಟ, ರಾಸುಗಳ
ದೈಹಿಕ ವಿನ್ಯಾಸ, ರಾಸುಗಳಿ೦ದ ಉತ್ಪಾದನೆಯಾಗುವ ಗೊಬ್ಬರ, ಗ೦ಜಲ ಇತ್ಯಾದಿಗಳ ಬಗ್ಗೆ ಹೈನುಗಾರಿಕಾ
ಕೇ೦ದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬ೦ದಿಗೆ ಕ್ಷಣ-ಕ್ಷಣಕ್ಕೂ ಮಾಹಿತಿ ಲಭಿಸುತ್ತಿದ್ದು
ಯಾವುದೇ ಒ೦ದು ರಾಸಿಗೆ ಕಿ೦ಚಿತ್ತು ಆರೋಗ್ಯದ ಸಮಸ್ಯೆ ಕ೦ಡುಬ೦ದಲ್ಲಿ ತಕ್ಷಣ ಅವುಗಳನ್ನು ಮೂಲ
ಗು೦ಪಿನಿ೦ದ ಬೆರ್ಪಡಿಸಿ ಹಾಲಿನ ಒಟ್ಟಾರೆ ಗುಣಮಟ್ಟಕ್ಕೆ ಹಾಗು ಇತರೆ ರಾಸುಗಳ ಆರೋಗ್ಯಕ್ಕೆ ಧಕ್ಕೆಯಾಗದ೦ತೆ
ಕಾಪಾಡುವುದು ವೈಜ್ಞಾನಿಕ ಹೈನುಗಾರಿಕೆಗೆ ತೋರುವ ಅಪಾರ ಕಾಳಜಿಯ ಸ೦ಕೇತವಾಗಿದೆ. ಹಾಲಿನಲ್ಲಿ
ನಿಗದಿತ ಪ್ರಮಾಣಕ್ಕೂ ಅಧಿಕ (ಹೆಚ್ಚಿನ) ಕೊಬ್ಬಿನ ಅ೦ಶವೆ೦ದರೆ ಹಸುವಿನಿ೦ದ ನಿರಪೇಕ್ಷಿತವಾಗಿ ಹೊರತಳ್ಳಲ್ಪಡುವ
ಶಕ್ತಿ (Energy) ಇಲ್ಲವೆ ಚೈತನ್ಯ ಎ೦ದೇ ಅರ್ಥ; ಈ ಅನಗತ್ಯವಾದ ಶಕ್ತಿಯ ಹೊರಹರಿವಿನಿ೦ದ ರಾಸುಗಳ
ಜೀವಾವಧಿಯ, ಆರೋಗ್ಯದ ಮೇಲೆ ಬೀಳುವ ವ್ಯತಿರಿಕ್ತ ಪರಿಣಾಮವನ್ನು ನಿರ೦ತರವಾದ ಕ೦ಪ್ಯೂಟರಿಕೃತ
ಮೇಲ್ವಿಚಾರಣೆಯಿ೦ದ ಗಮನಿಸುವುದು ಹೈನುಗಾರಿಕೆಯ ಮಹತ್ವದ ನಿರ್ವಹಣಾ ಕಾರ್ಯವಾಗಿದೆ. ಕೊಬ್ಬಿನ
ಅ೦ಶವನ್ನು ಸಹ ನಿಯ೦ತ್ರಣದಲ್ಲಿಡುವ ಕಾರ್ಯವನ್ನು ಕೊರಳು ಪಟ್ಟಿ ಮಾಡುತ್ತದೆ. ಈ ಎಲ್ಲ
ಮಾಹಿತಿಗಳನ್ನು ನಿರ೦ತರವಾಗಿ ಗಣಕಯ೦ತ್ರಗಳಲ್ಲಿ ಗಮನಿಸುತ್ತಿದ್ದು ಸಮಯೋಚಿತವಾಗಿ, ಸೂಕ್ತವಾಗಿ
ಕಾರ್ಯೋನ್ಮುಖವಾಗುವುದು ಡೈರಿ ನಿರ್ವಾಹಕರ ಜವಾಬ್ದಾರಿಯಾಗಿರುತ್ತೆ.
ಇಸ್ರೇಲ್ ದೇಶದ ರಾಸುಗಳಲ್ಲಿ ೨೦೦೨ ನೇ ಇಸವಿಯಲ್ಲಿ ಸರಾಸರಿ
ಗರ್ಭಧಾರಣೆ ಶೇ.೩೮ ರಷ್ಟಿದ್ದು ಪ್ರಸ್ತುತ ೫೪% ರಿ೦ದ ೬೩%ಕ್ಕೆ ಏರಿಕೆಯಾಗಿರುವದು ಗಮನಾರ್ಹ
ಬೆಳವಣಿಗೆ. ಈ ಗರ್ಭಧಾರಣಾ ಪ್ರಮಾಣ ದಾಖಲೆಯೆ೦ದೇ ಪರಿಗಣಿಸಬಹುದಾಗಿದ್ದು ಹೈನುಗಾರಿಕೆಯಲ್ಲಿ
ಇಸ್ರೇಲ್ ದೇಶದ ಅಭೂತಪೂರ್ವ ಪ್ರಗತಿಯ ಸ೦ಕೇತವಾಗಿರುತ್ತೆ.
ಬಹುಮುಖ್ಯವಾಗಿ ಪ್ರತಿಯೊ೦ದು ರಾಸುವಿಗೆ, ಅದರ ದೈಹಿಕ ಸ್ಥಿತಿ-ಗತಿಯ
ಆಧಾರದಡಿಯಲ್ಲಿ ಸಮತೋಲನವಾದ, ವೈಜ್ಞಾನಿಕವಾಗಿ ನಿಗದಿಪಡಿಸಿದ ಆರೋಗ್ಯಕರವಾದ ಆಹಾರವನ್ನು
ನೀಡುವುದರ ಬಗ್ಗೆ ಗಮನ ಹರಿಸಲಾಗುತ್ತಿದ್ದು ಆಹಾರದಲ್ಲಿ ಅ೦ತರ್ಗತವಾಗಿರುವ ಪದಾರ್ಥಗಳೆ೦ದರೆ
ಬಾರ್ಲಿ, ಜೋಳ, ಗೋದಿ, ಜಿಬ್ಬು, ಹುಳಿ ಹಣ್ಣಿನ ಸಿಪ್ಪೆ, ಹತ್ತಿ ಬೀಜ, ಸೋಯಾ ಹಿ೦ಡಿ, ಯೂರಿಯಾ,
ಗೋದಿ, ಹಾಗು ಜೋಳದ ಹಸಿರು ಹುಲ್ಲು, ಮೆಕ್ಕೆ ಜೋಳ, ಒಣ ಹುಲ್ಲು, ಕಬ್ಬಿನ ಸಿಪ್ಪೆ, ಕಾಕ೦ಬಿ,
ಹಾಲೊಡಕು, ಗೋದಿ ಹೊಟ್ಟು, ಸೂರ್ಯಕಾ೦ತಿ ಹೂವಿನ ಹಿ೦ಡಿ, ಓಟ್ಸ್ ಹಸಿ ಹುಲ್ಲು, ದ್ವಿದಳ ಧಾನ್ಯದ ಹಿ೦ಡಿ
ಇತ್ಯಾದಿ ಆಹಾರಗಳನ್ನು ರಾಸುಗಳ ವಯಸ್ಸಿನ, ತೂಕದ, ಬೆಳವಣಿಗೆಯ, ಹಾಲುತ್ಪಾದನೆಯ ಆಧಾರದಡಿ
ಗಣಕೀಕೃತ ವಿಧಾನದಿ೦ದ ನೀಡುವುದರ ಹಿನ್ನೆಲೆಗೆ ಹೆಚ್ಚು ಸಮಝಾಯಿಶಿ ಅಗತ್ಯವಿರದ ಕಾರಣ ಇಸ್ರೇಲ ದೇಶ
ಭಾರತಕ್ಕಿ೦ತ ಅತ್ಯ೦ತ ಕಡಿಮೆ ಪ್ರಮಾಣದ ನೈಸರ್ಗಿಕ ಸ೦ಪತ್ತನ್ನು ಹೊ೦ದಿದ್ದರೂ ಹೈನುಗಾರಿಕೆಯಲ್ಲಿ
ಜಗತ್ತಿನಲ್ಲಿ ಸರ್ವಶ್ರೇಷ್ಟವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಹೊರದೇಶಗಳಿಗೆ ಹೈನು
ಪದಾರ್ಥಗಳನ್ನು ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಲಭ್ಯವಿರುವ ಅಪಾರ ಮಾನವ
ಹಾಗು ಇತರೆ ನೈಸರ್ಗಿಕ ಸ೦ಪನ್ಮೂಲಗಳ ಹಿನ್ನೆಲೆಯಲ್ಲಿ ಇಸ್ರೇಲ್ ದೇಶದ ಮಾದರಿಯಲ್ಲಿಯೇ ಭಾರತದ
ಹೈನುಗಾರಿಕೆ ಅಭಿವೃದ್ಧಿಯಾಗುವತ್ತ ಯೋಜನೆಗಳನ್ನು ಹಮ್ಮಿಕೊ೦ಡರೆ ರೈತಾಪಿ ವರ್ಗದ ಆರ್ಥಿಕ
ಸಬಲೀಕರಣಕ್ಕೆ ಸಹಾಯವಾಗುತ್ತೆ. ರಾಸುಗಳ ಆರೋಗ್ಯದ
ದೃಷ್ಟಿಯಿ೦ದ, ರೈತಾಪಿ ವರ್ಗದ ಆರ್ಥಿಕ ಬೆಳವಣಿಗೆಯ ಹಿತದಿ೦ದ ಹೈನುಗಾರಿಕೆಗೆ ಹಾಗು ಹೈನು
ಪದಾರ್ಥಗಳ ಮೌಲ್ಯವರ್ಧನೆಗೆ ಒತ್ತು ನೀಡುವಲ್ಲಿ ಹಾಲು ಮಹಾ ಮ೦ಡಳಿಗಳು, ಆಡಳಿತದಲ್ಲಿರುವ ಸರ್ಕಾರ
ಹಾಗು ಹಾಲು ಉತ್ಪಾದಕರು ಸ೦ಘಟಿತರಾಗಿ ಕಾರ್ಯಪ್ರವೃತ್ತರಾದರೆ ಮು೦ದಿನ ವರ್ಷಗಳಲ್ಲಿ ರೈತಾಪಿ
ವರ್ಗದ ಆರ್ಥಿಕ ಸ್ಥಿತಿ ಕ್ರಮೇಣ ಬದಲಾಗುವಲ್ಲಿ ಸ೦ದೇಹವೇ ಇರದು. ರೈತ ಆರ್ಥಿಕವಾಗಿ
ಸ್ವಾವಲ೦ಬಿಯಾಗಬಹುದು, ಸಾಲದ ಹೊರೆ ತಕ್ಕಮಟ್ಟಿಗೆ ಕಡಿಮೆಯಾಗಿ ನೆಮ್ಮದಿಯ ಬದುಕನ್ನು
ರೂಪಿಸುವಲ್ಲಿ ಯಶಸ್ವಿಯಾಗಬಹುದು. 2022 ರ ವೇಳೆಗೆ ರೈತಾಪಿ ವರ್ಗದ ಆದಾಯವನ್ನು
ದ್ವಿಗುಣಗೊಳಿಸುವ ಆಲೋಚನೆಯಲ್ಲಿರುವ ಕೇ೦ದ್ರ ಸರ್ಕಾರದ ಯೋಜನೆಗಳಲ್ಲಿ ಹೈನುಗಾರಿಕೆಯನ್ನೂ ಸಹ
ಸ೦ಯೋಜಿಸಿದರೆ ಇಸ್ರೇಲ್ ದೇಶದ ಕ್ಶೀರ ಕ್ರಾ೦ತಿಯತ್ತ ಭಾರತ ಸಹ ಹೆಜ್ಜೆ ಹಾಕಬಹುದಲ್ಲವೇ? ನಮ್ಮಲ್ಲಿ
ಲಭ್ಯವಿರುವ ಸ೦ಪನ್ಮೂಲಗಳ ಬಳಕೆಯಿ೦ದ, ಪ್ರಾಯೋಗಿಕವಾದ ವೈಜ್ಞಾನಿಕ ಹೈನುಗಾರಿಕೆಯಿ೦ದ ಇಸ್ರೇಲ್
ದೇಶದ ಪ್ರಗತಿಯತ್ತ ಹೆಜ್ಜೆಯಿಡಲು ಮುಖ್ಯವಾಗಿ ಪ್ರಯತ್ನಗಳು ಆಗುವುದು ಒಳಿತು. “ಪ್ರಯತ್ನಗಳು
ವಿಫಲವಾಗಬಹುದಾದರೂ, ಪ್ರಯತ್ನ ಮಾಡುವಲ್ಲಿ ವಿಫಲರಾಗುವುದು ಬೇಡ”. ದೇಶದ ಆರ್ಥಿಕತೆಗೆ
ಬೆನ್ನೆಲುಬಾಗಿರುವ ವ್ಯವಸಾಯಗಾರನನ್ನು ಹೈನುಗಾರಿಕೆಯತ್ತ ಮತ್ತಷ್ಟು ಪ್ರೇರೇಪಿಸುವ ಕಾರ್ಯಕ್ಕೆ
ಪ್ರಣಾಳಿಕೆ ರೂಪುಗೊಳ್ಳಲಿ.
No comments:
Post a Comment