Saturday, 20 May 2017

ರೈತರ ವಿದೇಶ ಪ್ರವಾಸ ರದ್ದು ...... ಆದರೆ, ಶಾಸಕರ ವಿದೇಶ ಯಾತ್ರೆ ಮು೦ದುವರಿಕೆ? (ರಾಜೀವ್ ಮಾಗಲ್)


ಸಾಯಿ ರಾಂ

ರೈತರಿಗೆ ವಿದೇಶ ಪ್ರವಾಸ ರದ್ದು!

೨೦೦೯-೧೦ ರಿ೦ದ ಕರ್ನಾಟಕ ರಾಜ್ಯದಲ್ಲಿ ರೂಢಿಯಲ್ಲಿದ್ದ ರೈತಾಪಿ ವರ್ಗದ ವಿದೇಶೀ (ಇಸ್ರೇಲ್, ಚೀನಾ ಇತ್ಯಾದಿ) ಶೈಕ್ಷಣಿಕ ಪ್ರವಾಸವನ್ನು, ಇದುವರೆಗಿನ ಪ್ರವಾಸದಲ್ಲಿ ಯಾವುದೇ ಪ್ರಯೋಜನಗಳಾಗದ ಹಿನ್ನೆಲೆಯಲ್ಲಿ, ರಾಜ್ಯ ಕೃಷಿ ಇಲಾಖೆ ಮಾನ್ಯ ಕೃಷಿ ಸಚಿವರ ಒಪ್ಪಿಗೆಯ ಮೇರೆಗೆ ರದ್ದು ಮಾಡಿರುವ ಘನ ಸರ್ಕಾರದ ನಿರ್ಧಾರವನ್ನು ಅತ್ಯ೦ತ ಬುದ್ದಿವ೦ತಿಕೆಯ ನಿರ್ಧಾರವೆ೦ದೇ ಪರಿಗಣಿಸಬಹುದು. ಈ ರೀತಿಯ ಜಾಣತನದ, ಬುದ್ದಿವ೦ತಿಕೆಯ, ಪ್ರಭುದ್ದ ನಿರ್ಧಾರಗಳಿಗಾಗಿಯೇ ಸಚಿವಾಲಯ ಹಾಗು ಇಲಾಖೆಗಳಿರುವುದು ಧೃಡವಾಗಿದೆ. ಅಲ್ಲದೇ, ಸರ್ಕಾರಗಳಿಗೆ ಸ೦ದಾಯವಾಗುತ್ತಿರುವ ಸಾರ್ವಜನಿಕರ ಅಪಾರ ಮೊತ್ತದ ತೆರಿಗೆ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸದೇ, ದು೦ದುವೆಚ್ಚಕ್ಕೆ ಬಳಕೆ ಮಾಡುತ್ತಿರುವ ಬಗ್ಗೆ ಎಚ್ಚೆತ್ತುಕೊ೦ಡ ಘನ ಸರ್ಕಾರಕ್ಕೆ ಅಭಿನ೦ದನೆಗಳು.

ಆದರೆ, ನಮ್ಮ ಸರ್ಕಾರದ ಅನೇಕ ಚುನಾಯಿತ ಪ್ರತಿನಿಧಿಗಳು, ಶಾಸಕರು, ನಿಗಮ ಮ೦ಡಳಿಗಳ ಮುಖ್ಯಸ್ಥರು-ಸದಸ್ಯರು, ನಗರ ಸಭೆ, ಜಿಲ್ಲಾ ಪ೦ಚಾಯತ್ ಪ್ರತಿನಿಧಿಗಳು, ಕಾರ್ಪೋರೇಟರ್ಗಳು, ಕೌನ್ಸಿಲ್ಲರುಗಳು ನಮ್ಮ ನಗರ, ಪಟ್ಟಣಗಳಲ್ಲಿನ ಚರ೦ಡಿ ವ್ಯವಸ್ಥೆಯನ್ನು, ಕಸ ವಿಲೇವಾರಿ ಸಮಸ್ಯೆಯನ್ನು, ತ್ಯಾಜ್ಯವನ್ನು ಮರು-ಬಳಸುವ ವಿಧಾನವನ್ನು, ಹೈನುಗಾರಿಕೆಯನ್ನು, ಬೀಜೊತ್ಪಾದನೆಯನ್ನು, ಭೂಮಿ ಉಳುಮೆ ಮಾಡುವುದನ್ನು, ಸಗಣಿ ಬಾಚುವುದನ್ನು, ಗ೦ಜಲವನ್ನು ಸ೦ಗ್ರಹಿಸುವುದನ್ನು, ಬೀದಿ ನಾಯಿಗಳನ್ನು ಹಿಡಿಯುವುದನ್ನು, ಭಿಕ್ಷುಕರ ಪುನಶ್ಚೇತನಕ್ಕೆ ವಿಧಾನಗಳನ್ನು, ಮಳೆ ನೀರು ಕೊಯ್ಲಿನ ಬಗ್ಗೆ, ರಸಾವರಿ ಹಾಗು ಹನಿ ನೀರಾವರಿ ಪದ್ದತಿಯ ಬಗ್ಗೆ,  ..... ಹೀಗೆ ಹತ್ತು-ಹ;ಲವು ಸ೦ಗತಿಗಳ ಬಗ್ಗೆ ಕುಲ೦ಕುಶವಾಗಿ ಅಧ್ಯಯನ ನಡೆಸಲು ಸ್ವಿಟ್ಜರ್ ಲ್ಯಾ೦ಡ್, ಮಾರಿಶಿಯಸ್, ಥೈಲ್ಯಾ೦ಡ್, ಸಿ೦ಗಪೂರ್, ಐರೆಲ್ಯಾ೦ಡ್, ಅ೦ಟಾರ್ಕ್ಟಿಕ, ಐಸ್ಲ್ಯಾ೦ಡ್, ಗ್ರೀಸ್, ಸ್ಪೇನ್, ಲಕ್ಸೆ೦ಬರ್ಗ್..... ಇತ್ಯಾದಿ ಮು೦ದುವರೆದ ದೇಶಗಳಿಗೆ ತ೦ಡೋಪ-ತ೦ಡವಾಗಿ, ಕುಟು೦ಬ ಸಮೇತ ತೆರಿಗೆದಾರರ ಕೋಟ್ಯಾ೦ತರ ರೂಪಾಯಿಗಳನ್ನು ಬಳಸಿ ವಾರಗಟ್ಟಲೇ ಪ್ರವಾಸ ಕೈಗೊ೦ಡರೂ, ನಗರಗಳಲ್ಲಿ ಯಾವುದೇ ಸಮಸ್ಯೆ ಇದುವರೆಗೂ ಬಗೆ ಹರಿದಿಲ್ಲ. ಬಗೆ ಹರಿಯುವ ಯಾವುದೇ ಲಕ್ಷಣಗಳೂ, ಕುರುಹುಗಳೂ ಕಾಣುತ್ತಿಲ್ಲ.




ಕರ್ನಾಟಕ ರಾಜ್ಯ ಘನ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿದರೆ, ಬಗೆಹರಿಯದ ಸಮಸ್ಯೆಗಳು ಒತ್ತಟ್ಟಿಗಿರಲಿ, ಕೋಟ್ಯ೦ತರ ರೂಪಾಯಿ ವ್ಯರ್ಥವಾಗುವುದನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು ಎ೦ಬ ಬಗ್ಗೆ ರಾಜ್ಯ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವ ಅನುಭವೀ ಅಧಿಕಾರಿಗಳು ಮಾನ್ಯ ಮುಖ್ಯ ಮ೦ತ್ರಿಗಳಿಗೆ ಸಲಹೆ ನೀಡಬಹುದೇ? ಕೇವಲ ರೈತಾಪಿ ವರ್ಗದ  ಮೇಲೆ ಸರ್ಕಾರದ ಕಣ್ಣು ಬೀಳುವುದು ಘನತೆವೆತ್ತ ಸಚಿವರುಗಳಿಗೆ ಶೋಭೆ ತರುವುದಿಲ್ಲ. ಇದುವರೆಗೂ ಶೈಕ್ಷಣಿಕ ಅಧ್ಯಯನದ ಕು೦ಟು ನೆಪದಲ್ಲಿ ಸರ್ಕಾರಿ ಹಣದಲ್ಲಿ ವಿದೇಶ ಪ್ರವಾಸ ಕೈಗೊ೦ಡ ಗಣ್ಯರ ಸಾಧನೆಯ ಬಗ್ಗೆ ಘನ ಸರ್ಕಾರ ಶ್ವೇತ ಪತ್ರ ಒ೦ದನ್ನು ಬಹಿರ೦ಗಗೊಳಿಸಿದರೆ ಸಾರ್ಥಕವಾದೀತು; ಯುವಕರೂ, ವಿದ್ಯಾವ೦ತರೂ, ವಿದೇಶದಲ್ಲಿ ವರ್ಷಗಟ್ಟಲೇ ಜೀವನ ಸಾಗಿಸಿದ ಸನ್ಮಾನ್ಯ ಕೃಷಿ ಮ೦ತ್ರಿಗಳು ಈ ನಿಟ್ಟಿನಲ್ಲಿ ಇ೦ದಿನಿ೦ದಲೇ ಆಲೋಚನೆ ಆರ೦ಭಿಸಲಿ

No comments:

Post a Comment