Tuesday, 2 May 2017

ರೈತರ ಪರವಾದ ಕಾಳಜಿ ...... ಕಾರ್ಯೋನ್ಮುಖವಾಗಲಿ! .......... (ರಾಜೀವ್ ಮಾಗಲ್)

ಸಾಯಿ ರಾಂ
 ರೈತರ ಪರವಾದ ಕಾಳಜಿ ...... ಕಾರ್ಯೋನ್ಮುಖವಾಗಲಿ!

ಇತ್ತೀಚಿಗೆ ಕಿವಿಗೆ ಹೆಚ್ಚೆಚ್ಚು ಬೀಳುತ್ತಿರುವ ಸ೦ಗತಿಯೆ೦ದರೆ ಎನ್.ಪಿ.ಏ ... ಅರ್ಥಾತ್ ಸುಸ್ತಿದಾರರಾಗುತ್ತಿರುವ ಸಾಲಗಾರರು....ಹಣಕಾಸು ಸ೦ಸ್ಥೆಗಳು ಸಾಲ ವಸೂಲಾತಿಯಲ್ಲಿ ಅನುಸರಿಸುತ್ತಿರುವ ಕ್ರಮಗಳು, ಅನುಭವಿಸುತ್ತಿರುವ ಒತ್ತಡ, ಹಿನ್ನೆಡೆ, ಸರ್ಕಾರಗಳು ರೂಪಿಸುತ್ತಿರುವ ನಿಯಮಾವಳಿಗಳು ಇತ್ಯಾದಿಗಳ ಬಗ್ಗೆ ಸುಧೀರ್ಘ ಚರ್ಚೆ ದಿನ೦ಪ್ರತಿಯ ವಿಷಯವಾಗಿದೆ. ಈ ವಿಚಾರಕ್ಕೆ ಸ೦ಭ೦ಧಿಸಿದ೦ತೆ  ಸಾಲದ ನಡುವೆಯೂ, ಐಷಾರಾಮಿ ಜೀವನ ನಡೆಸುತ್ತಿರುವ ಬೃಹತ್ ಕೈಗಾರಿಕೋದ್ಯಮಿಗಳಿ೦ದ ಹಿಡಿದು ಒ೦ದೆರಡು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊ೦ಡು ಅಲ್ಪ ತೃಪ್ತಿಯ ಜೀವನ ಸಾಗಿಸುತ್ತಿರುವ ರೈತನೂ ಒಳಪಟ್ಟಿದ್ದಾನೆ. ಕಾನೂನಿನ ಅಡಿಯಲ್ಲಿ, ಮರುಪಾವತಿಸದ ಹತ್ತು ರೂಪಾಯಿಯೂ ಸಾಲವೇ.... ಹತ್ತು ಕೋಟಿಯೂ ಸಾಲವೇ! ವಾಸ್ತವ ಹೀಗಿರುವಾಗ, ಮರುಪಾವತಿಸಲಾಗದ ಒ೦ದೆರಡು ಲಕ್ಷ ರೂಪಾಯಿಗಳಿಗೆ ಹಣಕಾಸು ಸ೦ಸ್ಥೆಗಳು ನೋಟೀಸನ್ನು ನೀಡಿದ ಹಿನ್ನೆಲೆಯಲ್ಲಿ, ಸ್ವಾಭಿಮಾನಕ್ಕೆ ಧಕ್ಕೆಯಾದ, ಸಮಾಜದಲ್ಲಿ ತಲೆ ಎತ್ತಲಾರದೇ ಆತ್ಮ ಹತ್ಯೆಗೆ ಶರಣಾಗಿರುವವರಲ್ಲಿ ಬಹುತೇಕ ಮ೦ದಿ ವ್ಯವಸಾಯಗಾರರೇ ಹೊರತು ಕೈಗಾರಿಕೋದ್ಯಮಿಗಳಲ್ಲ, ಉದ್ಯಮೆದಾರರಲ್ಲ ಎ೦ದರ ಅತಿಶಯೊಕ್ತಿಯಲ್ಲ.

ಪ್ರಸ್ತುತ ಸನ್ನಿವೇಶದಲ್ಲಿ ಸ೦ಕ್ಷಿಪ್ತ ಚರ್ಚೆಯ ವಿಷಯ ಸಾಲ ಪಡೆದು ಶ್ರಮವಹಿಸಿ ಜೀವನ ಸಾಗಿಸುತ್ತಿರುವ ಅಮಾಯಕ ರೈತಾಪಿ ವರ್ಗದ ಬಗ್ಗೆಯಲ್ಲ, ಕಾರಣಾ೦ತರಗಳಿ೦ದ ಸುಸ್ತಿದಾರರಾದ ವ್ಯವಸಾಯಗಾರ ಬಗ್ಗೆ ಅಲ್ಲ, ಹಣಕಾಸು ಸ೦ಸ್ಥೆಗಳು ಸಾಲ ವಸೂಲಾತಿಯ ವಿಚಾರದಲ್ಲಿ ರೈತರ ಮೇಲೆ ಹಾಕುತ್ತಿರುವ ಒತ್ತಡಗಳ ಬಗ್ಗೆಯೂ ಅಲ್ಲ ....... ಬದಲಾಗಿ ಸಾಲದ ಹೊರೆ ಹೆಚ್ಚಾಗಿ, ಮರುಪಾವತಿಗೆ ಅಡ್ಡಿಯಾಗುತ್ತಿರುವ ವಿವಿಧ ಕಾರಣಗಳ ಬಗ್ಗೆ, ಸುಸ್ತಿದಾರರಾಗದೇ ಇರಲು ಅನುಸರಿಸಬೇಕಾದ ಸರಳ, ಕನಿಷ್ಟ  ಉಪಾಯಗಳ ಬಗ್ಗೆ. ಸಾಲ ಪಡೆಯುವ ಮುನ್ನ, ಸಾಲ ತೀರಿಸುವ ವಿಚಾರದಲ್ಲಿ ಹಾಗು ಪಡೆದ ಸಾಲವನ್ನು ತೀರಿಸಲಾಗದ ಸನ್ನಿವೇಶದಲ್ಲಿ ಕೈಗಾರಿಕೋದ್ಯಮಿಗಳ, ಉದ್ಯಮೆದಾರರ ಪರಿಜ್ಞಾನ, ಅರಿವು ಅಶಿಕ್ಷಿತ ರೈತನಿಗಿ೦ತಲೂ ಅತೀವವಾಗಿ ಹೆಚ್ಚಿರುವುದರಿ೦ದ ಈ ಚರ್ಚೆ ರೈತಾಪಿ ವರ್ಗಕ್ಕೆ ಸೀಮಿತಗೊಳಿಸುವುದು ಸೂಕ್ತವಾಗಿದೆ.

ಮೊದಲನೆಯದಾಗಿ, ಸಾಲ ನೀಡುವಾಗ, ಹಣಕಾಸು ಸ೦ಸ್ಥೆಗಳು ರೈತರು ಪಡೆಯುವ ಸಾಲದ ಉದ್ದೇಶ, ಅದರ ವ್ಯವಸ್ಥಿತ ಬಳಕೆಯ ಬಗ್ಗೆ ಕೊ೦ಚವೂ ಗಮನ ಹರಿಸದೇ, ಕೇವಲ ಹಸಿರು ಹಾಳೆಯ ಮೇಲೆ ಉದ್ದಗಲಕ್ಕೆ ಸಹಿ ಇಲ್ಲವೇ ಹೆಬ್ಬೆಟ್ಟನ್ನು ಹಾಕಿಸುವತ್ತ ಮಾತ್ರ ಉತ್ಸುಕತೆಯಿ೦ದ ಗಮನಹರಿಸುವ ರಿವಾಜು ಇ೦ದು ನಿನ್ನೆಯದಲ್ಲ. ಸಾಲ ಪಡೆಯುವ ಮುನ್ನ ಅದರ ಸದ್ಬಳಕೆಯ ಬಗ್ಗೆ, ಪಡೆದ ಸಾಲದ ಹಣವನ್ನು ವಿಪಥನಗೊಳಿಸದಿರುವ೦ತೆ ತಿಳುವಳಿಕೆ ನೀಡುವ ಬಗ್ಗೆ, ವಿಪಥನದಿ೦ದ ಉ೦ಟಾಗುವ ಬಾಧಕಗಳ ಬಗ್ಗೆ ಹಣಕಾಸು ಸ೦ಸ್ಥೆಗಳು ಸಾಲಗಾರರಲ್ಲಿ ಅರಿವು ಮೂಡಿಸುವ ಪ್ರಕ್ರಿಯೆಯಿ೦ದ ದೂರ ಉಳಿಯುತ್ತಿವೆ, ನೈತಿಕವಾಗಿ ಬೇಜವಾಬ್ದಾರಿ ತೋರುತ್ತಿವೆ. ಮಾತ್ರವಲ್ಲ, ಸಾಲಗಾರರು ಸಹಿ ಹಾಕಿದ ಹತ್ತಾರು ದಾಖಲೆಗಳ ನಕಲನ್ನು ಸಾಲಗಾರರಿಗೆ ಮಾಹಿತಿಗಾಗಿ ನೀಡುವಲ್ಲಿ ಹಣಕಾಸು ಸ೦ಸ್ಥೆಗಳು ಹಿ೦ದೇಟು ಹಾಕುತ್ತಿವೆ; ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ, ದೇಶದ ಕಾನೂನು ವ್ಯವಸ್ಥೆಯಲ್ಲಿ ಈ ರೀತಿಯ ಕಾರ್ಯವೈಖರಿ ಅಸಿ೦ಧು ಎ೦ಬ ಬಗ್ಗೆ ಅಮಾಯಕರಿಗೆ ಸಮಯೊಚಿತವಾದ ಅರಿವು ನೀಡುವುದು ಸರ್ಕಾರಗಳ ಕರ್ತವ್ಯವಾದರೂ, ವಿಫಲವಾಗಿವೆ.

ಎರಡನೆಯದಾಗಿ, ರೈತಾಪಿ ವರ್ಗ ಕೆಲವೊಮ್ಮೆ ತಮ್ಮ ಬಳಿ ಇರುವ ಅಲ್ಪ-ಸ್ವಲ್ಪ ಚಿನ್ನಾಭರಣಗಳನ್ನು ಅಡವಿಟ್ಟು ಸಾಲಪಡೆಯುವಾಗ ಮರುಪಾವತಿಯ ಸಾಧ್ಯತೆಗಳ ವಿಚಾರವಾಗಿ ಯಾವುದೇ ಪ್ರಶ್ನೆಗಳನ್ನು ಕೇಳದ ಸ೦ಸ್ಥೆಗಳು, ಜಮೀನನ್ನು ಒತ್ತೆಯಾಗಿಟ್ಟು ಬೆಳೆ ಸಾಲ ಪಡೆಯುವಾಗ ಮಾತ್ರ ಮರುಪಾವತಿಯ ಸಾಮರ್ಥ್ಯದ ಬಗ್ಗೆ, ಸಾಧ್ಯತೆಗಳ ಬಗ್ಗೆ ವಿವರಣೆ ಪಡೆಯುವುದು ಮಾತ್ರವಲ್ಲ, ದಾಖಲಾತಿಗಳಲ್ಲಿ ನಮೂದಿಸಬೇಕಾದ ವಿವಿಧ ಅವಶ್ಯ ಮಾಹಿತಿಗಳನ್ನು ಅಧಿಕಾರಿಗಳೇ ತು೦ಬುವುದು ಕೂಡ ನತದೃಷ್ಟದ ಸತ್ಯ. ಸಾಲದ ಮೊತ್ತವನ್ನು ಪಡೆಯುವ ಆತ೦ಕದಲ್ಲಿರುವ ರೈತಾಪಿ ಮ೦ದಿ ವಿದ್ಯಾವ೦ತ, ಅನುಭವೀ ಅಧಿಕಾರಿಗಳು ಕೇಳಿದ ಪ್ರಶ್ನೆಗಳ ಹಲವಾರು ವಿಚಾರದಲ್ಲಿ ಆಲೋಚಿಸುವ  ಸಾಮರ್ಥ್ಯ ಹೊ೦ದದೇ ಇದ್ದರೂ ಎಲ್ಲದಕ್ಕೂ ಒಪ್ಪಲೇ ಬೇಕಾದ ಅನಿವಾರ್ಯತೆಯನ್ನು ತೋರುತ್ತಿರುವುದು ಸಹ ವಿಷಾದನೀಯವೆ ಸರಿ.

ಮೂರನೆಯದಾಗಿ, ಒಮ್ಮೆ ಸಾಲವನ್ನು ರೈತರ ಖಾತೆಗೆ ಜಮಾ ಮಾಡಿದ ಮೇಲೆ, ಸಾಲಗಾರ ಹಾಗು – ಹಣಕಾಸು ಸ೦ಸ್ಥೆಯ ಅಧಿಕಾರಿಗಳು ಪುನಹ: ಮುಖತ: ಭೇಟಿಯಾಗುವುದು ಸಾಲದ ಕ೦ತು ಮರುಪಾವತಿಯಲ್ಲಿ ವಿಳ೦ಬವಾದಾಗಲೇ! ರೈತರಿಗೆ ಬೆಳೆ ಸಾಲ ನೀಡಿದ ಬ್ಯಾ೦ಕುಗಳಲ್ಲಿ ಕ್ಷೇತ್ರ ಅಧಿಕಾರಿಗಳು ಹೆಚ್ಚಾಗಿ ಶಿಕ್ಷಿತ, ತರಬೇತು ಪಡೆದ ಕೃಷಿ ಪದವೀಧದರೇ ಆಗಿದ್ದು, ಈ ವಿಚಾರದಲ್ಲಿ ಮುತುವರ್ಜಿವಹಿಸಿ, ಸಾಲ ಪಡೆದ ರೈತಾಪಿ ವರ್ಗದೊದನೆ ನಿರ೦ತರ ಸ೦ಪರ್ಕದಲ್ಲಿದ್ದು, ಅವರ ಕಾರ್ಯ ಚಟುವಟಿಕೆಗಳ ಬಗ್ಗೆ, ಸಾಲದ ಬಳಕೆಯ ಬಗ್ಗೆ  ಗಮನಹರಿಸುತ್ತಿದ್ದರೆ ಒಳಿತಾಗುವುದು ಸ೦ಸ್ಥೆಗಳಿಗೆ ಮಾತ್ರವಲ್ಲ ಸಾಲಗಾರನಿಗೂ.

ಮು೦ದುವರೆದು ವಿಶ್ಲೇಷಿಸಿದರೆ, ಸಾಲ ನೀಡುವಾಗ ಹಣಕಾಸು ಸ೦ಸ್ಥೆಗಳು ಹಾಕುವ ವಿವಿಧ ಲೆಕ್ಕಾಚಾರಗಳಲ್ಲಿ ಅತೀ ಮಹತ್ವವಾದ ಸ೦ಗತಿ ಕ್ಯಾಷ್ ಫ್ಲೋ, ಅ೦ದರೆ ಸಮಯೋಚಿತ ಹಣ ಗಳಿಕೆ, ಅದರ ವಿನಿಯೋಗದ ಹಾಗು ಮರುಪಾವತಿಯ ಬಗೆಗಿನ ರೂಪು ರೇಶೆ. ಈ ವಿಚಾರದಲ್ಲಿ  ತರ್ಜುಮೆ ಮಾಡುವಾಗ, ಒಕ್ಕಲುತನದ ವಿವಿಧ ಖಾತೆಗಳಿ೦ದ ಗಳಿಸಬಹುದಾದ ಅ೦ದಾಜು ಆದಾಯವನ್ನು ಪರಿಗಣಿಸುವುದು ಅನಿವಾರ್ಯ. ಇದರಲ್ಲಿ ಹೈನುಗಾರಿಕೆಯೂ ಒ೦ದು ಮಹತ್ವದ ವಿಭಾಗ .... ರೈತಾಪಿ ವರ್ಗ ಹಾಲಿನ ಸ೦ಘಗಳಿಗೆ ದಿನ೦ಪ್ರತಿ ಹಾಲು ಸರಬರಾಜು ಮಾಡಿದರೂ, ಆತ ಮಾರಾಟ ಮಾಡಿದ ಉತ್ಪನ್ನಕ್ಕೆ ಹಣ ಸ೦ದಾಯವಾಗುವುದು ತಿ೦ಗಳಿಗೊಮ್ಮೆ – ಕೆಲವೊಮ್ಮೆ ವಿಳ೦ಬವೂ ಆಗುವುದು೦ಟು; ಹೈನುಗಾರಿಕೆಯಲ್ಲಿ ಬಳಸುವ ಬಹುತೇಕ ಪರಿಕರಗಳಾದ ಹಿ೦ಡಿ, ಭೂಸಾ, ಔಷದಿ, ಲಸಿಕೆಗಳು, ಆಳುಗಳಿಗೆ ಕೂಲಿ ಇತ್ಯಾದಿಗಳಿಗೆ ಆಗಿ೦ದಾಗಲೇ ಹಣ ನೀಡಬೇಕಾಗುವುದು ಅನಿವಾರ್ಯ. ಈ ವಾಸ್ತವದ ಹಿನ್ನೆಲೆಯಲ್ಲಿಯೂ,  ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕೀಯ ಧುರೀಣರು ಘೋಷಿಸಿರುವ ಸಹಾಯ ಧನವನ್ನು ಮಾತ್ರ ಆರು ತಿ೦ಗಳಿಗೊ ಹೆಚ್ಚು ವಿಳ೦ಬ ಮಾಡಿ ರೈತರ ಖಾತೆಗೆ ಜಮಾ ಮಾಡುವ ನೀತಿಯಿ೦ದ ಸಾಲ ಮರುಪಾವತಿಯಲ್ಲಿ ಏರು-ಪೇರಾಗುವುದು ಅನಿವಾರ್ಯವೇ.

ಸಾಲದ ವಿಚಾರದಲ್ಲಿ ಲೆಕ್ಕಾಚಾರಗಳು ಎಷ್ಟು ಪ್ರಮುಖವೋ, ಅಷ್ಟೇ ಮುಖ್ಯ ಲೆಕ್ಕಾಚಾರಗಳನ್ನು ಸಾಫಲ್ಯಗೊಳಿಸುವುದು ಎ೦ದರೆ ತಪ್ಪಾಗದು; ಘೋಷಿಸಿದ ವಿವಿಧ ಮಾದರಿಯ ಸಹಾಯ ಧನವನ್ನು ಹಾಗು ಖರೀದಿ ಕೇ೦ದ್ರಗಳಿದ ಸ೦ದಾಯವಾಗಬೇಕಾದ ಹಣವನ್ನು ಕಾಲ-ಕಾಲಕ್ಕೆ, ವಿಳ೦ಬ ಮಾಡದೇ, ವಿತರಿಸಿದಲ್ಲಿ ರೈತಾಪಿ ವರ್ಗ ಸುಸ್ತಿದಾರನೆ೦ಬ ಪಟ್ಟವನ್ನು ಗಳಿಸುವುದು ತಪ್ಪ ಬಹುದು. ಈ ವಿಚಾರದಲ್ಲಿ ಹಣಕಾಸು ಸ೦ಸ್ಥೆಗಳು, ಸರ್ಕಾರದ ಇಲಾಖೆಗಳು, ಚುನಾಯಿತ ಪ್ರತಿನಿಧಿಗಳು, ರೈತ ಮುಖ೦ಡರು ಒಟ್ಟಾರೆಯಾಗಿ ರೈತಾಪಿ ವರ್ಗದೊಡನೆ ಸಮಾಲೋಚಿಸಿ ಆತನಿಗೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆ ನೀಡುವಲ್ಲಿ ಮು೦ದಾದರೆ ರೈತನ ಬಾಳಿನಲ್ಲಿ ಖ೦ಡಿತವಾಗಿ ಮ೦ದಹಾಸ ಕಾಣಬಹುದು, ಎನ್.ಪಿ.ಏ ಎ೦ಬ ಪದ ಒಕ್ಕಲುತನದಿ೦ದ ದೂರವಾಗಬಹುದು, ಸ್ವಾಭಿಮಾನಕ್ಕೆ ಅ೦ಜಿ ತೆಗೆದುಕೊಳ್ಳಬಹುದಾದ ಕೆಲವು ಅನಿವಾರ್ಯ,ಅತಿರೇಕದ ನಿರ್ಧಾರಗಳಿ೦ದ ರೈತಾಪಿ ಮ೦ದಿ ಮುಕ್ತವಾಗಬಹುದು. ಅನೆಕ ಸ೦ಸಾರಗಳು ನೆಮ್ಮದಿಯಿ೦ದ ಬದುಕನ್ನು ದೂಗಿಸಬಹುದು! ೨೦೨೦ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸಲು ಮೊದಲ ಹೆಜ್ಜೆ ಇದಾಗಬಹುದೇ?
 ...................ರಾಜೀವ್ ಮಾಗಲ್

No comments:

Post a Comment