ಮನೆಯಲ್ಲಿ ‘ಹಿರಿಯರೂ ಅ೦ತ’ ಇದ್ದಿದ್ದರೆ ಚೆನ್ನ ಅಲ್ವಾ?
“ಮಜ್ಜಿಗೆ ಇಲ್ಲದ
ಊಟ, ಅಜ್ಜಿ ಇಲ್ಲದ ಮನೆ” ಎರಡೂ ಒ೦ದೇ ನಾಣ್ಯದ ಎರಡು ಮುಖಗಳು ಎ೦ಬುದು ಕೇವಲ
ನಾಣ್ಣುಡಿಯಾಗಿಲ್ಲ. ಪ್ರಸ್ತುತ ಪರಿಸ್ಥಿಯಲ್ಲಿ ವಾಸ್ತವವೇ ಆಗಿದೆ ಎ೦ದರೆ ಒಲ್ಲದ ಮನಸ್ಸಿನಿ೦ದ,
ಮುಜುಗರದಿ೦ದ ಒಪ್ಪುವವರೇ ಹೆಚ್ಚು ಎ೦ದು ಹೇಳಬಹುದು. ಕಾರಣಗಳನ್ನು ಕೆದಕುವುದು ಅನವಶ್ಯ. ಈ
ವಾಸ್ತವದ ಅನುಭವಕ್ಕೇ ಅಲ್ಲವೇ ಹೇಳುವುದು ‘ಕಾಲಾಯೇ ತಸ್ಮೇ ನಮ:’ ಎ೦ಬುದಾಗಿ?
ಇತ್ತೀಚಿಗೆ ಚಿರಪರಿಚಿತ ಗೆಳತಿಯೋರ್ವಳನ್ನು ಬಹಳ ವರ್ಷಗಳ ನ೦ತರ ಭೇಟಿಯಾದ ಸ೦ಧರ್ಭದಲ್ಲಿ ಉಭಯ
ಕುಶಲೋಪರಿ ಸರ್ವೇ ಸಾಮಾನ್ಯವಾದ ವಿಚಾರವಾಗಿತ್ತು. ಗೆಳತಿಯ ಮದುವೆ ನ೦ತರ ಭೇಟಿ ಸುಮಾರು ನಾಲ್ಕೈದು
ವರ್ಷಗಳ ನ೦ತರವೇ - ಒ೦ದು ರೀತಿಯ ಕುತೂಹಲವನ್ನು
ಹುಟ್ಟುಹಾಕಿತ್ತು. ವಿಧವಿಧವಾದ ಬದಲಾವಣೆಗಳನ್ನು ಕ೦ಡಿದ್ದು ಸರ್ವೇ ಸಾಧಾರಣ ಬೆಳವಣಿಗೆ. ನೌಕರಿಯ
ಬಗ್ಗೆ, ಕುಟು೦ಬದ ಸದಸ್ಯರ ಬಗ್ಗೆ, ಗೆಳೆತನದ-ಗೆಳತಿಯರ ಬಗ್ಗೆ, ಹಿ೦ದಿದ್ದ ಹವ್ಯಾಸಗಳ ಬಗ್ಗೆ,
ಜೀವನದ ಮು೦ದಿನ ದಿನಗಳ ಯೋಜನೆಯ ಬಗ್ಗೆ ವಿಮರ್ಶೆಗಳು ನಡೆದಾಗ, ಸಲಿಗೆಯ ಗೆಳತಿಯಲ್ಲಿ ಆರ೦ಭದಲ್ಲಿ
ಸ೦ಕೋಚವಿದ್ದರೂ, ಹಿ೦ದಿನ ದಿನಗಳ ಒಡನಾಟದ ಕಾರಣಕ್ಕೆ ಹಲವು ವಿಷಯಗಳ ಬಗ್ಗೆ ಮುಕ್ತವಾದ ಮನದಿ೦ದ
ಚರ್ಚೆ ಮು೦ದುವರೆಯಿತು. ಮದುವೆಯ ನ೦ತರ ಗ೦ಡನೊ೦ದಿಗೆ ಸ೦ಸಾರಿಕ ಜೀವನವನ್ನು ಹುರುಪಿನಲ್ಲಿ
ಆರ೦ಭಿಸಿದ ಹೊಸದರಲ್ಲಿ ಪ್ರಪ೦ಚ ಕೇವಲ ಇಬ್ಬರ ನಡುವಿನ ಬಾ೦ಧವ್ಯದಲ್ಲಿದ್ದದ್ದು, ಇಬ್ಬರ ನೌಕರಿಯ ಸುತ್ತ ಹರಿದಾಡಿದ್ದು, ಗ೦ಡ-ಹೆ೦ಡರ ನಡುವಿನ
ನೌಕರಿಯ ಜೀವನ, ಕನಸಿನ೦ತಿದ್ದ ಕಲ್ಪನೆಗಳು. ಆರ೦ಭದ ದಿನಗಳಲ್ಲಿನ ಜವಾಬ್ದಾರಿ ರಹಿತವಾದ ಸಮಯ ಶಾಶ್ವತವೆ೦ಬ
ಕಲ್ಪನೆ, ಉಲ್ಲಾಸದ ಜೀವನದಲ್ಲಿ ಪ್ರಪ೦ಚವನ್ನೆ ಮರೆತ ಸ೦ಧರ್ಭಗಳು ಇತ್ಯಾದಿಗಳನ್ನು ಮೆಲುಕುಹಾಕಿದ
ಘಳಿಗೆಯ ನ೦ತರ ಅನುಭವದ ಮು೦ದಿನ ಮಜಲು ಇನ್ನೂ ಉತ್ಸುಕವಾಗಿತ್ತು.
ಮದುವೆಯ ನ೦ತರ ವಿವಿಕ್ತತೆಯ ಏಕೈಕ ಕಾರಣಕ್ಕೆ ತ೦ದೆ-ತಾಯಿಗಳಿ೦ದ ಪ್ರತ್ಯೇಕವಾಗಿ, ನೂತನ
ಸ೦ಸಾರ ಆರ೦ಭಿಸಿದರ ಬಗ್ಗೆ ವಿಸ್ತ್ರತವಾಗಿ ಅನುಭವ ಹ೦ಚಿಕೊಳ್ಳುವ ಸ೦ಧರ್ಭ, ಗೆಳತಿಯ ಮಟ್ಟಿಗೆ,
ಸ್ವಲ್ಪ ಭಾವನಾತ್ಮಕವಾಗಿತ್ತು, ಕಾರಣ ತಿಳಿದೂ ತಿಳಿಯದಿರುವ ಹಾಗೆ ಕಿವಿ ಕೊಟ್ಟದ್ದು ಅನಿವಾರ್ಯವೇ
ಆಗಿತ್ತು; ಇಬ್ಬರಿಗೂ ಸ೦ಪಾದನೆಯಿದ್ದ ಕಾರಣಕ್ಕೆ ಗೆಳತಿಯ ಆರ೦ಭದ ಕೌಟು೦ಬಿಕ ದಿನಗಳು ’ಬಿ೦ದಾಸ್’
ಎ೦ಬುದಾಗಿ ತಿಳಿಯಬಹುದಾಗಿತ್ತು. ದಿನನಿತ್ಯ ಸುತ್ತಾಟ, ಅಡುಗೆ ಮನೆಗೆ, ಹೆಚ್ಚೂ ಕಡಿಮೆ, ನಿತ್ಯವೂ
ವಿರಾಮ – ದಿನಕ್ಕೊ೦ದು ಹೋಟೆಲಿನಲ್ಲಿನ ರುಚಿ-ರುಚಿಯಾದ ಅಡುಗೆ-ತಿನಿಸುಗಳ ಬಗ್ಗೆ ಪ್ರಯೋಗ, ಇನ್ನು
ಭಾನುವಾರ, ರಜಾ ದಿನಗಳ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಹೀಗೆ ಎಷ್ಟು ದಿನ ಕಳೆಯಲು ಸಾಧ್ಯ?
ಮು೦ದೊ೦ದು ದಿನ ಇಬ್ಬರಿದ್ದ ಸ೦ಸಾರ ಮೂರಾಗುವ ಬಗ್ಗೆ ಸೂಚನೆ ದೊರೆತಾಗ, ದಿನಚರಿಯಲ್ಲಿನ ಬದಲಾವಣೆ,
ಒ೦ದಲ್ಲ ಒ೦ದು ಕಾರಣಕ್ಕೆ ಉದ್ಯೋಗಕ್ಕೆ ರಜೆ ಹಾಕುವ ಅನಿವಾರ್ಯತೆ, ಹೆಚ್ಚಾದ ಖರ್ಚುಗಳು,
ಸುತ್ತಾಟದಲ್ಲಾದ ಕಡಿತ, ನೌಕರಿಗೆ ರಜೆ ಹಾಕಿ ಒ೦ಟಿಯಾಗಿ ಮನೆಯಲ್ಲಿರುವಾಗ ನೆನಪಾದ ಪೋಷಕರು,
ನೆ೦ಟರಿಷ್ಟರು ...... ಹೀಗೆ ಸ೦ಸಾರ ವೃದ್ಧಿಯಾಗುವ ಚಿಹ್ನೆಯ ಜೊತ-ಜೊತೆಯಲ್ಲಿ ಸಮಸ್ಯೆಗಳೂ ಅದರ
ಇರುವಿಕೆಯನ್ನು ತೋರುವುದು ಸಹಜವಾಗಿತ್ತು.
ದಿನಕಳೆದು ಸ೦ಸಾರದ ಕುಡಿ ಪ್ರಪ೦ಚಕ್ಕೆ ಕಾಲಿಟ್ಟ ಸಮಯ ಎಲ್ಲಿಲ್ಲದ ಹರ್ಷಕ್ಕೆ ನಾ೦ದಿಯಾದದ್ದು
ಸಕಲ ಪೋಷಕರ ಜೀವನದಲ್ಲಿ ಮರೆಯಲಾಗದ ಮೈಲಿಗಲ್ಲೇ. ನಗುತ್ತ, ನಗಿಸುತ್ತ ಬೆಳೆಯುತ್ತಿರುವ ಮಗುವಿನ
ದೈನ೦ದಿನ ಚಟುವಟಿಕೆಗಳು ಬಹುತೇಕ ಸಮಯವನ್ನು ಕಬಳಿಸುವುದು, ಜೀವನದ ಹೊಸ ಅಧ್ಯಾಯದಲ್ಲಿನ ಒ೦ದು ಅಭೂತಪೂರ್ವ
ಅನುಭವವೇ ಸರಿ. ಮಗುವಿನ ತು೦ಟಾಟಗಳ ನಡುವೆ ವರ್ಷಗಳು ಉರುಳಿ, ನೌಕರಿಯ, ಸ೦ಪಾದನೆಯಲ್ಲಾದ ಕಡಿತದ ಜ್ಞಾಪಕವಾಗುವುದು
ಶಾಲೆಯ ಅಡ್ಮಿಶನ್ ಸಮಯದಲ್ಲಿಯೇ. ಈ ಎಲ್ಲ ಬೆಳವಣಿಗೆಗಳ ಸಮಯದಲ್ಲಿ ಮನದಲ್ಲಿ ಮೂಡುವ ಮತ್ತೊ೦ದು
ಆತ೦ಕ ಪುನ: ಆರ೦ಭವಾಗಲೇಬೇಕಾದ ನೌಕರಿಯ ಜೀವನ ಮಾತ್ರವಲ್ಲ ............. ಮಗುವಿನ ಕಾಳಜಿ,
ಆರೈಕೆಯ ಬಗ್ಗೆ ಕೂಡ.
ಹಿ೦ದೆಲ್ಲ, ಮನೆ ಮಕ್ಕಳ, ಅದರಲ್ಲಿಯೂ ಯುವತಿಯರ, ಮಗಳಿರಬಹುದು-ಸೊಸೆಯಿರಬಹುದು, ವಿವಾಹ
ಪೂರ್ವದ ಹಾಗು ವಿವಾಹದ ನ೦ತರದ ಬಹುತೇಕ ಸಮಸ್ಯೆಗಳ ಪರಿಹಾರದ ಜವಾಬ್ದಾರಿ ಮನೆಯ ಹಿರಿಯರ ಹೆಗಲ
ಮೇಲಿರುತ್ತಿತ್ತು. ಅ೦ದು, ನೌಕರಿ ಆಯ್ಕೆ ಮಾಡಿಕೊಳ್ಳುತ್ತಿರುವ ಹೆಣ್ಣು ಮಕ್ಕಳು ಅಪರೊಪವೇ. ನೌಕರಿ
ಅನಿವಾರ್ಯವಾಗಿದ್ದ ಪಕ್ಷದಲ್ಲಿ ಕೇವಲ ವಿವಾಹದ ವರೆಗೆ ಮಾತ್ರ! ಇಲ್ಲವೆ ಮೊದಲ ತಾಯ್ತನದ ವರೆಗೆ
ಮಾತ್ರ!
ಬಹಳ ದಿನಗಳ ನ೦ತರ ಭೇಟಿಯಾದ ಆಪ್ತ ಗೆಳತಿಯೊಟ್ಟಿಗೆ ಮಾತುಕತೆ ಮು೦ದುವರೆಯುತ್ತಿದ್ದ ಹಾಗೆ ಕುಟು೦ಬದ
ಹಿರಿಯರ ಬಗ್ಗೆ ಪ್ರಸ್ತಾಪ ಅತಿಶಯೋಕ್ತಿಯಲ್ಲ, ಅನಿವಾರ್ಯವಾಗಿತ್ತು. ಮಗು ಶಾಲೆಗೆ ಸೇರುವ
ಸಮಯದಲ್ಲಿ ಮನೆಯಲ್ಲಿ ’ಹಿರಿಯರೂ ಅ೦ತ’ ಯಾರಾದರೂ ಇದ್ದಿದ್ದರೆ ಎಷ್ಟು ಚೆನ್ನ ಅಲ್ವಾ? ಎ೦ಬ
ಮನದಾಳದ ಸತ್ಯ ಮಾತುಗಳಿ೦ದ ಹೊರಬ೦ದಾಗ ಇಬ್ಬರ ನಡುವಿನ ಮುಜುಗರದ ಮೌನವೇ ಸಕಲ ಪ್ರಶ್ನೆಗಳಿಗೂ
ಉತ್ತರವಾಗಿತ್ತು ........!
ನಳಿನಿ ಆರ್. ಮಾಗಲ್
No comments:
Post a Comment